ಕೊಲಂಬೋ: ಮಾಲ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳನ್ನು ಭಗ್ನ ಪ್ರೇಮಿಯೊಬ್ಬ ಚಾಕುವಿನಿಂದ ಇರಿದು ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ಶ್ರೀಲಂಕಾದ ವಟ್ಟಾಳದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಗ್ರಾಹಕನ ಸೋಗಿನಲ್ಲಿ ಮಾಲ್ ಪ್ರವೇಶ ಮಾಡುವ ಯುವಕ ಅಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ಬಳಿ ತೆರಳಿ ಮಾತನಾಡಿಸಿದ್ದಾನೆ. ನಂತರ ತನ್ನ ಶರ್ಟ್ ನ ಹಿಂಬದಿಯಲ್ಲಿದ್ದ ಚಾಕುವನ್ನು ತೆಗೆದು ನೋಡ ನೋಡುತ್ತಿದ್ದಂತೆಯೇ ಯುವತಿ ಹೊಟ್ಟೆ ಮತ್ತು ಎದೆಗೆ ಇರಿದಿದ್ದಾನೆ. ಈ ವೇಳೆ ಯುವತಿ ಕುಸಿದು ಬಿದಿದ್ದು, ಕೂಗಿ ಕೊಂಡಿದ್ದಾಳೆ. ಸ್ಥಳದಲ್ಲಿದ್ದ ಗ್ರಾಹಕರು ಮತ್ತು ಸಿಬ್ಬಂದಿಗಳು ಆತನನ್ನು ತಡೆಯುವ ಪ್ರಯತ್ನ ಮಾಡಿದರಾದರೂ ಆತ ಅವರನ್ನು ಕೊಲ್ಲುವ ಬೆದರಿಕೆ ಹಾಕಿದ.
ಅಲ್ಲದೆ ಅದೇ ಚಾಕುವಿನಿಂದ ಕೂಡಲೇ ತನ್ನ ಕತ್ತನ್ನು ಕೂಡ ಸೀಳಿಕೊಂಡಿದ್ದಾನೆ. ತಾನೂ ರಕ್ತದ ಮಡುವಿನಲ್ಲಿ ಬಿದ್ದಿರುವಂತೆಯೇ ಕುಸಿದುಬಿದಿದ್ದ ಯುವತಿಗೆ ಮತ್ತೆ ಚಾಕು ಹಾಕಿದ್ದಾನೆ. ಈವಿಷ್ಟೂ ದೃಶ್ಯಾವಳಿಗಳು ಮಾಲ್ ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಪ್ರಪಂಚದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ವಿಡಿಯೋ ಚಿತ್ರೀಕರಣ ಎಲ್ಲಿ ಆಗಿದೆ ಎಂಬುದರ ಕುರಿತು ಹಲವು ಅನುಮಾನಗಳು ಮೂಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಇದು ಶ್ರೀಲಂಕಾದ ವಟ್ಟಾಳದಲ್ಲಿ ನಡೆದ ಪ್ರದೇಶ ಎಂದು ಹೇಳುತ್ತಿದ್ದರೆ ಮತ್ತೆ ಕೆಲವರು ಇದು ತಮಿಳುನಾಡಿನ ಚೆನ್ನೈನ ಅಣ್ಣಾನಗರದಲ್ಲಿರುವ ಶಾಪಿಂಗ್ ಮಾಲ್ ನಲ್ಲಿ ನಡೆದ ಘಟನೆ ಎಂದು ಹೇಳುತ್ತಿದ್ದಾರೆ.
ಮೂಲಗಳ ಪ್ರಕಾರ ಯುವಕನಿಂದ ಹತ್ಯೆಗೊಳಗಾದ ಯುವತಿ ಹೆಸರು ಫಾತಿಮಾ ರೋಷಾನಾ ಇಸ್ಮಿ ಎಂದು. ಈಕೆಗಿನ್ನೂ 19 ವರ್ಷ ವಯಸ್ಸಾಗಿದ್ದು, ಹತ್ಯೆ ಮಾಡಿದ ಯುವಕ ಮತ್ತು ಫಾತಿಮಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಅಲ್ಲದೆ ಮದುವೆ ಮಾಡಿಕೊಳ್ಳಲು ಮುಂದಾಗಿದ್ದರು. ಆದರೆ ಇಬ್ಬರ ಧರ್ಮಗಳು ಬೇರೆಯಾಗಿದ್ದರಿಂದ ಯುವತಿಯ ಕುಟುಂಬದವರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಯುವತಿ ಮದುವೆಗೆ ನಿರಾಕರಿಸಿದ್ದಳು. ಹೀಗಾಗಿ ವ್ಯಾಘ್ರಗೊಂಡ ಯುವಕ ಆಕೆ ಕೆಲಸ ಮಾಡುತ್ತಿದ್ದ ಮಾಲ್ ಗೆ ಬಂದು ಮನಸೋ ಇಚ್ಛೆ ಆಕೆಯನ್ನು ಇರಿದಿದ್ದಾನೆ. ಬಳಿಕ ತಾನೂ ಕೂಡ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಮಾಲ್ ನ ಸಿಬ್ಬಂದಿಗಳು ಕೂಡಲೇ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸದರಾದರೂ ಯುವತಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಆದರೆ ಕತ್ತು ಸೀಳಿಕೊಂಡಿದ್ದ ಯುವಕನನ ಪ್ರಾಣ ರಕ್ಷಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಇದು ಮುಂಬೈ ಘಟನೆಯಲ್ಲ: ಪೊಲೀಸರ ಸ್ಪಷ್ಟನೆ
ಇದೇ ವೇಳೆ ಈ ವಿಡಿಯೋ ದೃಶ್ಯಾವಳಿಗಳು ಮುಂಬೈನ ಅಂಧೇರಿಯಲ್ಲಿರುವ ಪ್ರತಿಷ್ಟಿತ ಮಾಲ್ ವೊಂದರ ದೃಶ್ಯಾವಳಿಗಳು ಎಂದು ಹೇಳಲಾಗುತ್ತಿತ್ತು. ಅಲ್ಲದೆ ದೇಶಾದ್ಯಂತ ವಿಡಿಯೋ ವಾಟ್ಲಪ್ ಮತ್ತು ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನಲೆಯಲ್ಲಿ ನಿನ್ನೆ ಸ್ಪಷ್ಟನೆ ನೀಡಿರುವ ಅಂಧೇರಿ ಪೊಲೀಸ್ ಡಿಸಿಪಿ ಧನಂಜಯ ಕುಲಕರ್ಣಿ ಅವರು ಈ ಘಟನೆ ಮುಂಬೈನದ್ದಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಅಲ್ಲದೆ ಇಂತಹ ಊಹಾಪೋಹಗಳನ್ನು ನಂಬದಂತೆ ಮುಂಬೈ ನಿವಾಸಿಗಳಲ್ಲಿ ಮನವಿ ಮಾಡಿದ್ದಾರೆ.