ಮಹಾರಾಷ್ಟ್ರ ಸಚಿವ ವಿನೋದ್ ತಾವ್ಡೆ
ಮುಂಬೈ: ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಹೊಸ ವಿವಾದ ಅಂಟಿಕೊಂಡಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಪಂಕಜಾ ಮುಂಡೆ ವಿವಾದದ ಬೆನ್ನಲ್ಲೇ ಈಗ ಶಿಕ್ಷಣ ಸಚಿವ ವಿನೋದ್ ತಾವ್ಡೆ ವಿರುದ್ಧವೂ ಅಂತಹುದೇ ಅವ್ಯವಹಾರ ಆರೋಪ ಕೇಳಿಬಂದಿದೆ.
ಟೆಂಡರ್ ಕರೆಯದೇ ಅವರು ರು191 ಕೋಟಿಯ ಗುತ್ತಿಗೆಯನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದ್ದು, ಇದನ್ನು ತಾವ್ಡೆ ಅವರು ತಳ್ಳಿಹಾಕಿದ್ದಾರೆ. ಪ್ರಕರಣವನ್ನು ಗಣನೆಗೆ ತೆಗೆದುಕೊಂಡಿರುವ ಹಣಕಾಸು ಇಲಾಖೆಯ ಅವ್ಯವಹಾರದ ತನಿಖೆಗೆ ಮುಂದಾಗಿದೆ.
ಫೆ.11ರಂದು ರಾಜ್ಯಾದ್ಯಂತ ಇರುವ ಜಿಲ್ಲಾ ಪರಿಷತ್ ಶಾಲೆಗಳಿಗೆ 62,105 ಅಗ್ನಿಶಾಮಕಗಳ ಖರೀದಿಸುವಂತೆ ಶಿಕ್ಷಣ ನಿರ್ದೇಶಕರಿಗೆ ಹಣಕಾಸು ಇಲಾಖೆ ಆದೇಶಿಸಿತ್ತು. ಆದರೆ, ಇ-ಟೆಂಡರ್ ಕರೆಯದೇ ಗುತ್ತಿಗೆ ನೀಡಲಾಗಿತ್ತು. ಆ ಗುತ್ತಿಗೆಗೆ ಸಚಿವ ತಾವ್ಡೆ ಅಂಕಿತ ಹಾಕಿದ್ದರೂ, ಹಣಕಾಸು ಇಲಾಖೆ ಆಕ್ಷೇಪವೆತ್ತಿದ ಕಾರಣ ಅದು ಸ್ಥಗಿತಗೊಂಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ತಾವ್ಡೆ, ``ಗುತ್ತಿಗೆದಾರರಿಗೆ ಒಂದೇ ಒಂದು ರುಪಾಯಿಯನ್ನೂ ನೀಡಿಲ್ಲ. ಹಣಕಾಸು ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದ ತಕ್ಷಣವೇ ಆದೇಶಕ್ಕೆ ತಡೆ ತಂದಿದ್ದೇವೆ'' ಎಂದಿದ್ದಾರೆ.
ಅಗ್ನಿಶಾಮಕ ಖರೀದಿಗೆ ನಮ್ಮ ಶಿಕ್ಷಣ ಇಲಾಖೆಯಲ್ಲಿರುವ ಬಜೆಟ್ ರು.18 ಕೋಟಿ. ಆದರೆ ನನ್ನ ವಿರುದ್ಧ 191 ಕೋಟಿಯ ಆರೋಪ ಹೊರಿಸಿದ್ದಾರೆ. ನಾವು 6 ಕೋಟಿಯ ಉಪಕರಣಗಳನ್ನು ನೀಡಿದ್ದೇವೆ. ಈ ಪೈಕಿ ಒಂದೇ ಒಂದು ರುಪಾಯಿಯನ್ನೂ ಗುತ್ತಿಗೆದಾರರಿಗೆ ನೀಡಿಲ್ಲ.
-ವಿನೋದ್ ತಾವ್ಡೆ, ಶಿಕ್ಷಣ ಸಚಿವ
ನಿಮ್ಮೆಲ್ಲರ ವಿಶ್ವಾಸ ಮತ್ತು ಬೆಂಬಲದ ಮೂಲಕ ನಾನು ನನ್ನ ವಿರುದ್ಧದ ಸಂಚನ್ನು ಬಹಿರಂಗಪಡಿಸುತ್ತೇನೆ.
-ಪಂಕಜಾ ಮುಂಡೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ