ದೇಶ

ಆದರ್ಶ ಹೌಸಿಂಗ್ ಸೊಸೈಟಿ ಹಗರಣ: ಅಶೋಕ್ ಚೌಹಾಣ್ ಅರ್ಜಿ ವಜಾ

ಮುಂಬೈ: ಆದರ್ಶ್ ಹೌಸಿಂಗ್ ಸೊಸೈಟಿ ಫ್ಲ್ಯಾಟ್ ಹಗರಣದ ಚಾರ್ಜ್ ಶೀಟ್‌ನಲ್ಲಿ ತಮ್ಮ ಹೆಸರು ಕೈ ಬಿಡುವಂತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚೌಹಾಣ್ ಸಲ್ಲಿಸಿದ್ದ ಅರ್ಜಿಯನ್ನು ಮುಂಬೈ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.

ಹಗರಣದಲ್ಲಿ ತಾವು ಭಾಗಿಯಾಗಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ದೊರಕಿಲ್ಲದ ಕಾರಣ ಹಗರಣದಲ್ಲಿರುವ ತಮ್ಮ ಹೆಸರನ್ನು ಕೈ ಬಿಡಬೇಕು ಎಂದು ಅಶೋಕ್ ಚೌಹಾಣ್ ಅರ್ಜಿಸಲ್ಲಿಸಿದ್ದರು. ಈ ಅರ್ಜಿಯನ್ನು ಇಂದು ವಿಚಾರಣೆ ಕೈಗೊಂಡ ಮುಂಬೈ ಹೈಕೋರ್ಟ್ ಚೌಹಾಣ್ ಅವರ ಅರ್ಜಿಯನ್ನು ತಿರಸ್ಕರಿಸಿದೆ.

ಕಾರ್ಗಿಲ್ ಸಮರದ ಮೃತ ಪಟ್ಟ ಯೋಧರ ಪತ್ನಿಯರಿಗೆ ಮನೆ ನೀಡುವ ಸಲುವಾಗಿ ದಕ್ಷಿಣ ಮುಂಬೈನ ಕೊಲಾಬಾ ಪ್ರದೇಶದಲ್ಲಿದ್ದ 31 ಮಹಡಿಯ ಆದರ್ಶ್ ಸೊಸೈಟಿ ಫ್ಲ್ಯಾಟ್‌ಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ. ಇದನ್ನು ರಾಜಕಾರಣಿಗಳು, ಅವರ ಸಂಬಂಧಿಕರು ಹಾಗೂ ನಿವೃತ್ತ ಸೇನಾಧಿಕಾರಿಗಳಿಗೆ ನೀಡಲಾಗಿತ್ತು.

2010ರಲ್ಲಿ ಹಗರಣ ಬೆಳಕಿಗೆ ಬಂದಿತ್ತು. ಈ ಪ್ರಕರಣವನ್ನು ಅಂದಿನ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಿತ್ತು. ಸಿಬಿಐ ತನಿಖೆಯ ವೇಳೆ ಹಗರಣದಲ್ಲಿ ಆಗಿನ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಅಶೋಕ್ ಚೌಹಾಣ್ ಅವರು ಮೃತ ಯೋಧರ ಪತ್ನಿಯಂದಿರಿಗೆ ನಿರ್ಮಾಣ ಮಾಡಲಾಗಿದ್ದ ಕೆಲವು ಫ್ಲ್ಯಾಟ್‌ಗಳನ್ನು ತಮ್ಮ ಅತ್ತೆ ಹಾಗೂ ಇಬ್ಬರು ಸಂಬಂಧಿಕರಿಗೆ ನೀಡಿರುವುದಾಗಿ ತಿಳಿದುಬಂದಿತ್ತು. ಹಗರಣದಲ್ಲಿ ಅಶೋಕ್ ಚೌಹಾಣ್ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಚೌಹಾಣ್ ಅವರು ರಾಜಿನಾಮೆ ನೀಡುವ ಮೂಲಕ ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ತೊರೆದಿದ್ದರು.

SCROLL FOR NEXT