ಮುಂಬೈ: ಕಳೆದ ಸಂಕ್ರಾಂತಿ ಹಬ್ಬದಂದು ರೆಪೋ ದರವನ್ನು ಕಡಿತಗೊಳಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ರೆಪೋ ದರ ಕಡಿತಗೊಳಿಸಿ ಭಾರತೀಯರಿಗೆ ಸಿಹಿ ಸುದ್ದಿ ನೀಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೋ(Repo) ದರವನ್ನ ಮತ್ತೆ ಶೇ. 0.25ರಷ್ಟು ಕಡಿಮೆ ಮಾಡಿದೆ. ಈವರೆಗೆ ರೆಪೋ ದರ ಶೇ.7.75 ಇತ್ತು. ಇದೀಗ ಶೇ.7.50ಕ್ಕೆ ಇಳಿಸಿದೆ. ಆರ್‌ಬಿಐ
ನ ಈ ನಿರ್ಧಾರ ತತ್ ಕ್ಷಣದಿಂದಲೇ ಅನ್ವಯವಾಗಲಿದೆ. ರೆಪೋ ದರ ಕಡಿತದಿಂದ ಹಣದುಬ್ಬರ ಕಡಿಮೆಯಾಗಲಿದೆ ಎಂಬ ವಿಶ್ವಾಸವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗರ್ವನರ್ ರಘುರಾಮ್ ರಾಜನ್ ವ್ಯಕ್ತಪಡಿಸಿದ್ದಾರೆ.
ರೆಪೋ ದರ ಇಳಿಕೆಯಿಂದಾಗಿ ಬ್ಯಾಂಕ್ ಸಾಲದ ಬಡ್ಡಿ ದರಗಳು ಇಳಿಕೆಯಾಗುವ ಸಾಧ್ಯತೆ ಇದೆ.
30 ಸಾವಿರ ಗಡಿ ದಾಟಿದ ಸೆನ್ಸೆಕ್ಸ್
ರೆಪೋ ದರ ಇಳಿಕೆ ಘೋಷಣೆಯಾಗುತ್ತಿದ್ದಂತೆಯೇ ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ 30 ಸಾವಿರ ಗಡಿ ದಾಟಿದೆ. ನಿಫ್ಟಿ 114 ಗೆ ಏರಿಕೆಯಾಗಿದೆ.
ಏನಿದು ರೆಪೋ ದರ..?
ವಾಣಿಜ್ಯ ಬ್ಯಾಂಕುಗಳಿಗೆ ನೀಡಲಾಗುವ ಆರ್‌ಬಿಐ ಸಾಲದ ಮೇಲಿನ ಬಡ್ಡಿ ದರವಾಗಿದೆ ಈ ರೆಪೋ. ಇದಕ್ಕೆ ತದ್ವಿರುದ್ಧವಾದುದು ರಿವರ್ಸ್ ರಿಪೋ. ಇದು ವಾಣಿಜ್ಯ ಬ್ಯಾಂಕುಗಳು ತನ್ನಲ್ಲಿ ಇಡುವ ಠೇವಣಿಗಳಿಗೆ ರಿಸರ್ವ್ ಬ್ಯಾಂಕ್ ನೀಡುವ ಬಡ್ಡಿ ದರವಾಗಿದೆ. ಸದ್ಯಕ್ಕೆ, ಆರ್‌ಬಿಐ ರೆಪೋ ದರವನ್ನಷ್ಟೇ ಇಳಿಕೆ ಮಾಡಿದ್ದು, ರಿವರ್ಸ್ ರೆಪೋ ದರ ಯಥಾಸ್ಥಿತಿಯಲ್ಲಿದೆ.