ಅಮೇಥಿ: ಅಮೇಥಿ ಫುಡ್ ಪಾರ್ಕ್ ಕುರಿತಂತೆ ರಾಹುಲ್ ವಿರುದ್ಧ ವಾಗ್ಧಾಳಿ ಮುಂದುವರೆಸಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಾರ್ಪೋರೇಟ್ ಕಂಪನಿಗಳಿಂದ ಲಾಭ ಪಡೆಯುವ ಸಲುವಾಗಿ ರಾಹುಲ್ ಗಾಂಧಿ ರೈತರನ್ನು ತಿರಸ್ಕರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಕಾಲಿಕ ಮಳೆಯಿಂದ ಅಪಾರ ನಷ್ಟದಲ್ಲಿರುವ ರೈತರ ಸಮಸ್ಯೆ ಅರಿಯಲು ಇಂದು ಅಮೇಥಿಗೆ ಭೇಟಿ ನೀಡಿರುವ ಸ್ಮೃತಿ ಇರಾನಿ ಅವರು, ರಾಹುಲ್ ಗಾಂಧಿ ಅವರ ವಿರುದ್ಧ ಕಿಡಿಕಾರಿದ್ದಾರೆ. ಅಮೇಥಿ ಕುರಿತಂತೆ ಮೊದಲ ಬಾರಿಗೆ ರಾಹುಲ್ ಭಾಷಣ ಮಾಡಿದ್ದಾಗ ಅವರ ಮಾತು ಕೇವಲ ವ್ಯವಹಾರಿಕವಾಗಿತ್ತು. ರೈತರ ಪರವಾಗಿರಲಿಲ್ಲ. ಬೇಕಿದ್ದರೆ ಕಾಂಗ್ರೆಸ್ ಸರ್ಕಾರ ಅಧಿಕಾರದ ಸಂದರ್ಭದಲ್ಲಿದ್ದ ಕಡತಗಳನ್ನು ಪರಿಶೀಲಿಸಿದರೆ ಸತ್ಯಾಂಶ ತಿಳಿದುಕೊಳ್ಳಬಹುದು.
ಅಮೇಥಿ ಫುಡ್ ಪಾರ್ಕ್ ಯೋಜನೆ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಬಂದಿದ್ದು, ಈ ಯೋಜನೆಗೆ ಸರ್ಕಾರ 2010 ರಲ್ಲೇ ಭೂಮಿ ನೀಡಿತ್ತು. ಆದರೆ ಈ ವರೆಗೂ ಯಾವುದೇ ಪ್ರಗತಿ ಕಾರ್ಯಗಳು ಅಭಿವೃದ್ಧಿಗೊಂಡಿಲ್ಲ. ಕಾಂಗ್ರೆಸ್ ಹಿಂದಿನ ತಲೆಮಾರಿನಿಂದ ಇದ್ದ ಕನಸನ್ನು ಇದೀಗ ನರೇಂದ್ರ ಮೋದಿ ಸರ್ಕಾರ ನನಸು ಮಾಡಲು ಹೊರಟಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ರಾಹುಲ್ ಗಾಂಧಿ ಅಮೇಥಿ ಭೇಟಿ ನೀಡಿದ್ದರಿಂದಾಗಿ ತಾವು ಸಹ ಅಮೇಥಿಗೆ ಭೇಟಿ ನೀಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಸ್ಮೃತಿ ಇರಾನಿ, ರಾಹುಲ್ ಗಾಂಧಿ ಅಮೇಥಿಗೆ ಭೇಟಿ ನೀಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿತ್ತು. ಆದರೆ ನಾನು ಭೇಟಿ ನೀಡುವುದು ಈ ವರೆಗೂ ಯಾರಿಗೂ ತಿಳಿದಿರಲಿಲ್ಲ.
ಅಮೇಥಿ ವಿಧಾನಸಭಾ ಕ್ಷೇತ್ರದ ಸಂಸದರಾಗಿರುವ ರಾಹುಲ್ ಗಾಂಧಿ ಅವರು ಅಮೇಥಿಗೆ ಭೇಟಿ ನೀಡಿ ಇಲ್ಲಿನ ಜನರ ಸಂಕಷ್ಟಗಳನ್ನು ಕೇಳುತ್ತಿರಲಿಲ್ಲ. ನನ್ನ ಭೇಟಿಯ ನಂತರವಾದರೂ ಅಮೇಥಿ ಜನರಿಗೆ ರಾಹುಲ್ ಗಾಂಧಿ ಅವರ ದರ್ಶನವಾಗುತ್ತಿದೆ ಎಂಬುದಕ್ಕೆ ನನಗೆ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.