ದೇಶ

ನಿತೀಶ್ ಪಾಳಯಕ್ಕೆ ಜಿಗಿದ ಚಾಯ್ ಪೆ ಚರ್ಚಾ ರೂವಾರಿ!

Srinivasamurthy VN

ನವದೆಹಲಿ/ಪಟನಾ: ಲೋಕಸಭಾ ಚುನಾವಣೆ ವೇಳೆ ಸಾಕಷ್ಟು ಜನಪ್ರಿಯತೆ ಪಡೆದಿದ್ದ ಪ್ರಧಾನಿ ನರೇಂದ್ರ ಮೋದಿ ಅವರ `ಚಾಯ್ ಪೆ ಚರ್ಚಾ' ಐಡಿಯಾದ ಹಿಂದಿನ ರೂವಾರಿ ಪ್ರಶಾಂತ್ ಕಿಶೋರ್ ಅವರೀಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಂಡ ಸೇರಿದ್ದಾರೆ.

ಈ ವರ್ಷಾಂತ್ಯದಲ್ಲಿ ಚುನಾವಣೆ ಎದುರಿಸಲಿರುವ ಬಿಹಾರದಲ್ಲಿ ನಿತೀಶ್ ಪ್ರಚಾರಾಂದೋಲನದ ಭಾಗವಾಗಿ ಕಿಶೋರ್ ಕಾರ್ಯನಿರ್ವಹಿಸಲಿದ್ದಾರೆ. ಕೆಲ ವರ್ಷಗಳ ಹಿಂದೆ ಆಫ್ರಿಕಾದಿಂದ ವಾಪಸ್ ಬಂದಿದ್ದ ಕಿಶೋರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರಾಂದೋಲನದ ಪ್ರಮುಖ ಭಾಗವಾಗಿ ಕೆಲಸ ನಿರ್ವಹಿಸಿದ್ದರು. ಚುನಾವಣೆ ವೇಳೆ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಮೋದಿ ಅವರನ್ನು `ಚಾಯ್ ವಾಲಾ' ಎಂದು ವ್ಯಂಗ್ಯಮಾಡಿದ್ದನ್ನೇ ಮುಂದಿಟ್ಟುಕೊಂಡು `ಚಾಯ್ ಪೆ ಚರ್ಚಾ' ಎನ್ನುವ ವಿಶಿಷ್ಟ ಪ್ರಚಾರಾಂದೋಲನ ರೂಪಿಸಿದ್ದರು ಕಿಶೋರ್.

ಬಿಹಾರ ಚುನಾವಣೆಯನ್ನು ಮೋದಿ ಮತ್ತು ನಿತೀಶ್ ನಡುವಿನ ಕದನವೆಂದೇ ಪರಿಗಣಿಸಲಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಕಿಶೋರ್ ಮೋದಿ ಪ್ರತಿಸ್ಪರ್ಧಿ ಬೆನ್ನಿಗೆ ನಿಂತಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಮೂಲತಃ ಬಿಹಾರದ ಬಕ್ಸಾರ್‍ನವರಾದ ಕಿಶೋರ್ ಅವರಿಗೆ ರಾಜ್ಯದಲ್ಲಿ ಬಿಜೆಪಿಗಿಂತ ನಿತೀಶ್ ಅವರಿಗೆ ಗೆಲ್ಲುವ ಅವಕಾಶಗಳು ಹೆಚ್ಚಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆಫ್ರಿಕಾದಲ್ಲಿದ್ದರು!
ಆಫ್ರಿಕಾದಲ್ಲಿ ವಿಶ್ವಸಂಸ್ಥೆಯ ಆರೋಗ್ಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿಶೋರ್ ಅವರು 2011ರಲ್ಲಿ ಮೋದಿ ಅವರನ್ನು ಭೇಟಿಯಾದ ಬಳಿಕ ತಮ್ಮ ಹುದ್ದೆಗೆ ರಾಜಿನಾಮೆ ನೀಡಿ ಭಾರತಕ್ಕೆ ಮರಳಿದ್ದರು. ಮೂರು ವರ್ಷ ಮೋದಿ ಪರ ಪ್ರಚಾರೋಂದಲನ ರೂಪಿಸುವ ತಂಡದ ಭಾಗವಾಗಿ ಕಾರ್ಯನಿರ್ವಹಿಸಿದ್ದರು. ಕಿಶೋರ್ ಅವರು ಸಿಟಿಜನ್ಸ್ ಅಕೌಂಟೇಬಲ್ ಗವರ್ನೆನ್ಸ್ ಎನ್ನುವ ಸಂಘಟನೆ ಕಟ್ಟಿದ್ದರು. 2012ರ ಗುಜರಾತ್ ಚುನಾವಣೆ ವೇಳೆ ಇದು ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅವರನ್ನು ಉತ್ತಮ ಆಡಳಿತದ ಮುಖವಾಗಿ ಬಿಂಬಿಸುವಲ್ಲಿ ಯಶಸ್ವಿಯಾಗಿತ್ತು. ಜತೆಗೆ, ಮೋದಿ 3ಡಿ ಹಾಲೋಗ್ರಾಂ ಪ್ರಚಾರ ತಂತ್ರ ಕೂಡ ಕಿಶೋರ್ ಅವರದೇ ತಂತ್ರ.

3 ವರ್ಷ ಮೋದಿ ಜತೆಗೆ
2011ರಲ್ಲಿ ಆಫ್ರಿಕಾದಿಂದ ವಾಪಸಾಗಿದ್ದ ಕಿಶೋರ್ ಮೂರು ವರ್ಷ ಮೋದಿ ಜತೆಗೆ ಕೆಲಸ ಮಾಡಿದ್ದರು. ಲೋಕಸಭೆ ಚುನಾವಣೆ ಮುಗಿದ ನಂತರ ಒಂದು ವರ್ಷ ಸುಮ್ಮನಿದ್ದ ಅವರು ಈಗ ಬಿಹಾರ ಚುನಾವಣೆಯ ಮೂಲಕ ಮತ್ತೆ ಪ್ರಚಾರ ರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಇದೇ ವೇಳೆ ಅವರು, ತಾವು ಮೋದಿ ಪರ ವೈಯಕ್ತಿಕವಾಗಿ ಕೆಲಸ ಮಾಡಿದ್ದೇನೆಯೇ ಹೊರತು ಬಿಜೆಪಿ ಪರ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

SCROLL FOR NEXT