ಜಮ್ಮು: ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಭಾರತದ ವ್ಯವಹಾರಗಳಲ್ಲಿ ಮೂಗುತೂರಿಸುವುದು ಮೊದಲು ನಿಲ್ಲಿಸುವಂತೆ ಬುಧವಾರ ಪಾಕಿಸ್ತಾನಕ್ಕೆ ಸೂಚಿಸಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೊದಲ ವರ್ಷಾಚರಣೆಯ ಸಂಭ್ರಮದ ಅಂಗವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ 'ಜನ ಕಲ್ಯಾಣ ಪರ್ವ'ವನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಪಾಕಿಸ್ತಾನ ತಮ್ಮ ರಾಷ್ಟ್ರದ ಕಲ್ಯಾಣ ಬಯಸುವುದಾದರೆ ಅದು ಕಾನೂನು ಬಾಹೀರ ಚಟುವಟಿಕೆಗಳನ್ನು ಮತ್ತು ಇತರೆ ದೇಶಗಳ ವ್ಯವಹಾರಳಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು ಎಂದರು.
ಪಾಕಿಸ್ತಾನ ಭಾರತವನ್ನು ಗುರಿಯಾಗಿಸಿಕೊಂಡು ನಡೆಸುವ ಎಲ್ಲಾ ಕಾನೂನು ಬಾಹೀರ ಚುಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ರಾಜನಾಥ್ ಸಿಂಗ್ ಕಠಿಣ ಎಚ್ಚರಿಕೆ ನೀಡಿದ್ದಾರೆ.ಅಲ್ಲದೆ ಯಾರು ನಮ್ಮ ದೇಶದ ಗೌರವ, ಏಕತೆ ಹಾಗೂ ಸಾರ್ವಭೌಮತ್ವಕ್ಕೆ ಧಕ್ಕೆ ಮಾಡುವರೋ ಅವರಿಗೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದಿದ್ದಾರೆ.
ನಮಗೆ ನಮ್ಮ ಸೇನೆ, ಅರೆಸೇನಾ ಪಡೆಗಳು ಹಾಗೂ ಸಶಸ್ತ್ರ ಬಲಗಳ ಮೇಲೆ ನಂಬಿಕೆಯಿದೆ. ಅವರ ಸಮಗ್ರತೆ ಹಾಗೂ ದೇಶದ ಬಗೆಗಿನ ಪ್ರೀತಿಯ ಬಗ್ಗೆ ಸಂದೇಹ ಸಲ್ಲದು ಎಂದು ಸಚಿವರು ಹೇಳಿದ್ದಾರೆ.
ಇದೇ ವೇಳೆ, ಭಾರತ ನಿರಂತರವಾಗಿ ನೆರೆಯ ರಾಷ್ಟ್ರಗಳೊಂದಿಗೆ ಸ್ನೇಹ ಬಯಸುತ್ತಲೇ ಬಂದಿದೆ. ಆದರೆ ಪಾಕಿಸ್ತಾನ ಮಾತ್ರ ಯಾವಾಗಲೂ ಮೋಸ ಮಾಡುತ್ತಿದೆ ಎಂದು ಜರಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನದೆಡೆಗೆ ಸ್ನೇಹದ ಹಸ್ತ ಚಾಚಿದ್ದರು. ಆದರೆ ಅದು ಬೆನ್ನಿಗೆ ಚೂರಿ ಇರಿಯಿತು. ಮೋದಿ ಅವರು ಕಳೆದೊಂದು ವರ್ಷದ ಹಿಂದೆ ಅಧಿಕಾರಕ್ಕೆ ಬಂದಾಗ ನೆರೆಯ ಎಲ್ಲಾ ರಾಷ್ಟ್ರಗಳ ಮುಖ್ಯಸ್ಥರನ್ನು ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿಸಿದ್ದರು ಎಂದು ನೆನಪಿಸಿದರು.