ದೇಶ

ಭಾರತಕ್ಕೆ ಬಂತು ಪಾಕ್ ಗೂಢಚಾರಿ ಪಾರಿವಾಳ?

ನವದೆಹಲಿ: ಪ್ರತೀ ಭಾರಿಯೂ ಭಾರತದ ವಿರುದ್ಧ ಪಿತೂರಿ ನಡೆಸುತ್ತಿರುವ ಪಾಕಿಸ್ತಾನವು ಇದೀಗ ತಮ್ಮ ಗೂಢಚಾರ್ಯಕ್ಕೆ ಪಾರಿವಾಳವನ್ನು ಬಳಸಿಕೊಳ್ಳುತ್ತಿದೆಯೇ ಎಂಬ ಹಲವು ಅನುಮಾನಗಳು ಕಾಡತೊಡಗಿದೆ. ಇದಕ್ಕೆ ಕಾರಣ ಇಂದು ಭಾರತದಲ್ಲಿ ಬಂಧನಕ್ಕೀಡಾಗಿರುವ ಬಿಳಿ ಪಾರಿವಾಳ.

ಪಂಜಾಬ್ ಮತ್ತು ಪಾಕಿಸ್ತಾನದ ಗಡಿ ಪ್ರದೇಶದ ನಗರವಾಗಿರುವ ಪಠಾಣ್ ಕೋಟ್ ನಲ್ಲಿ ಇಂದು ದೊರಕಿರುವ ಪಾರಿವಾಳವೊಂದು ಈ ರೀತಿಯ ಎಲ್ಲಾ ಅನುಮಾನ ಹಾಗೂ ಕಳವಳ ಮೂಡಿಸುವುದಕ್ಕೆ ಕಾರಣವಾಗಿದೆ.

ಪಠಾಣ್ ಕೋಟ್ ಪ್ರದೇಶದ ನಿವಾಸಿಯಾಗಿರುವ ರಮೇಶ್ ಎಂಬುವವರ ಮನೆಯ ಬಳಿ ಬಂದು ಕುಳಿತಿದ್ದ ಪಾರಿವಾಳವನ್ನು ಆತನ ಮಗ ನೋಡಿದ್ದಾನೆ. ಈ ವೇಳೆ ಪಾರಿವಾಳವನ್ನು ಹಿಡಿದುಕೊಂಡ ರಮೇಶ್ ಮನೆಯಲ್ಲೇ ಸಾಕವುದಾಗಿ ಆಲೋಚನೆ ನಡೆಸಿದ್ದರು. ಕೆಲವು ಸಮಯದ ಬಳಿಕ ಪಾರಿವಾಳವನ್ನು ನೋಡಿದ ರಮೇಶ್ ಅವರಿಗೆ ಪಾರಿವಾಳದ ಕಾಲು ಹಾಗೂ ರೆಕ್ಕೆಗಳಲ್ಲಿ ಅಕ್ಷರಗಳು ಬರೆದಿರುವುದು ಕಂಡು ಬಂದಿದೆ.

ಅನುಮಾನ ಬಂದ ರಮೇಶ್ ಅವರು ತಕ್ಷಣ ಪೊಲೀಸ್ ಠಾಣೆಗೆ ಹೋಗಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಪರಿವಾಳವನ್ನು ಪರೀಕ್ಷೆಗೊಳಪಡಿಸಿದಾಗ ಪಾರಿವಾಳದ ಕಾಲಿನಲ್ಲಿ ಉರ್ದು ಭಾಷೆಯ ಸಂದೇಶವೊಂದು ಕಂಡುಬಂದಿದೆ.  ಈ ಸಂದೇಶದ ಮಧ್ಯೆ ದೂರವಾಣಿ ಸಂಖ್ಯೆಯೊಂದು ಕಂಡು ಬಂದಿರುವುದಾಗಿ ತಿಳಿದುಬಂದಿದೆ. ಆದರೆ ದೂರವಾಣಿ ಸಂಖ್ಯೆ ಯಾರ ಹೆಸರಿನಲ್ಲಿ ಹಾಗೂ ಯಾವ ಪ್ರದೇಶಕ್ಕೆ ಸಂಬಂಧಿಸಿದ್ದು ಎಂಬುದರ ಕುರಿತಂತೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಪಾರಿವಾಳ ಪ್ರಕರಣಕ್ಕೂ ಮುನ್ನ ಜಮ್ಮು ಹಾಗೂ ಪಠಾಣ್ ಕೋಟ್ ಪ್ರದೇಶದಲ್ಲಿ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸಕ್ರಿಯವಾಗಿರುವ ಕುರಿತಂತೆ ಪಂಜಾಬ್ ಪೊಲೀಸರಿಗೆ ಗುಪ್ತಚರ ಸಂಸ್ಥೆಯಾದ ಐಬಿ ಎಚ್ಚರಿಕೆ ನೀಡಿತ್ತು. ಗುಪ್ತಚರ ಇಲಾಖೆ ಸಂದೇಶ ನೀಡಿ ಕೆಲವು ಘಂಟೆಗಳ ಬಳಿಕ, ಪಾರಿವಾಳದ ಪ್ರಕರಣ ಬೆಳಕಿಗೆ ಬಂದಿರುವುದು ಅಧಿಕಾರಿಗಳ ಕಳವಳವನ್ನು ಮತ್ತಷ್ಟು ಹೆಚ್ಚಿಸಿದಂತಾಗಿದೆ.

SCROLL FOR NEXT