ನವದೆಹಲಿ: ಒಸಾಮಾ ಬಿನ್ ಲಾಡೆನ್ ನಂತಹ ಉಗ್ರ ಸತ್ತರೆ, ಸೋನಿಯಾ ಗಾಂಧಿ ಅವರು ರಾತ್ರಿಯಿಡೀ ನಿದ್ದೆ ಮಾಡದೇ ಕಣ್ಣೀರಿಡುತ್ತಾರೆಂದು ಹೇಳಿದ್ದ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಹೇಳಿಕೆಗೆ ಕಾಂಗ್ರೆಸ್ ಪಕ್ಷ ಸೋಮವಾರ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಸಾರ್ವಜನಿಕರ ಕಾರ್ಯಕ್ರಮವೊಂದರಲ್ಲಿ ಶನಿವಾರ ಮಾತನಾಡಿದ್ದ ನಖ್ವಿ ಅವರು, ಜಾತ್ಯಾತೀತೆಯ ಬಗ್ಗೆ ಮಾತನಾಡುವ ವಿರೋಧ ಪಕ್ಷಗಳು ಧರ್ಮವನ್ನು ಹಿಡಿದು ರಾಜಕೀಯ ಮಾಡುತ್ತದೆ. ಒಸಾಮಾ ಬಿನ್ ಲಾಡೆನ್ ನಂತರ ಒಬ್ಬ ಉಗ್ರ ಸತ್ತರೆ, ಸೋನಿಯಾ ಗಾಂಧಿ ಅವರು ನಿದ್ದೆ ಮಾಡದೆಯೇ ರಾತ್ರಿಯಿಡೀ ಕಣ್ಣೀರಿಡುತ್ತಾರೆಂದು ಹೇಳಿದ್ದರು.
ಇದೀಗ ನಖ್ವಿ ಅವರ ಹೇಳಿಕೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಆಡಳಿತ ಪಕ್ಷವಾಗಿರುವ ಬಿಜೆಪಿ ಕ್ಷಮೆಯಾಚಿಸುವಂತೆ ಪಟ್ಟು ಹಿಡಿದಿದೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಪಿ.ಸಿ ಚಾಕೋ ಅವರು, ಬಿಜೆಪಿಯವರು ಕಾಂಗ್ರೆಸ್ ನಾಯಕರು ಹಾಗೂ ಸೋನಿಯಾ ಗಾಂಧಿ ಅವರ ವಿರುದ್ಧ ಮಾತನಾಡಿದರೆ, ಅವರ ಪಕ್ಷ ಅವರಿಗೆ ಸ್ಥಾನ ಹಾಗೂ ಜನಪ್ರಿಯತೆಯನ್ನು ನೀಡುತ್ತದೆ ಎಂದು ತಿಳಿದುಕೊಂಡಿದ್ದಾರೆ. ಹೀಗಾಗಿಯೇ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ, ಈ ಬಾರಿ ಅಬ್ಬಾಸ್ ನಖ್ವಿ ಅವರು ನೀಡಿರುವ ಹೇಳಿಕೆ ನಿಜಕ್ಕೂ ಹಾಸ್ಯಸ್ಪದವಾದದ್ದು ಎಂದು ಹೇಳಿದ್ದಾರೆ.
ತಮ್ಮ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು, ಸಭೆಯಲ್ಲಿ ಬಾಟ್ಲಾ ಹೌಸ್ ಎನ್ ಕೌಂಟರ್ ನ ಉಗ್ರರು ಸಾವನ್ನಪ್ಪಿದ್ದ ಸಮಯದಲ್ಲಿ ಸೋನಿಯಾ ಗಾಂಧಿ ಅವರು ಕಣ್ಣೀರಿಟ್ಟಿದ್ದನ್ನು ನಾನು ಪುನರುಚ್ಛರಿಸಿದ್ದೆ ಅಷ್ಟೆ. ನಾನು ನೀಡಿದ್ದ ಹೇಳಿಕೆಯು ಯಾವ ಸಮಯದಲ್ಲಿ ನೀಡಿದ್ದೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ. ವಿವಾದದಿಂದ ದೂರ ಉಳಿಯಲು ತೀರ್ಮಾನಿಸಿದ್ದೆ. ಆದರೆ, ಇದೀಗ ಪರಿಸ್ಥಿತಿ ಬದಲಾಗಿದೆ. ಕಾಂಗ್ರೆಸ್ ನಾಯಕರು ನಾನು ನೀಡಿದ್ದ ಹೇಳಿಕೆಯನ್ನೇ ತಪ್ಪಾಗಿ ಅರ್ಥೈಸಿ ಅದನ್ನು ಅವರ ಲಾಭಕ್ಕಾಗಿ ಬದಲಾಯಿಸಿಕೊಳ್ಳ ಯತ್ನಿಸುತ್ತಿದ್ದಾರೆಂದು ಹೇಳಿದ್ದಾರೆ.