ನವದೆಹಲಿ: ಸಮಾನ ಶ್ರೇಣಿ, ಸಮಾನ ವೇತನ ಯೋಜನೆಗೆ ಸಂಬಂಧಪಟ್ಟ ಅಧಿಸೂಚನೆಯನ್ನು ತಿರಸ್ಕರಿಸಿರುವ ಮಾಜಿ ಸೇನಾ ಯೋಧರ ಆಕ್ಷೇಪಕ್ಕೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ಮನೋಹರ್ ಪರ್ರಿಕರ್, ಪ್ರತಿಯೊಬ್ಬರನ್ನು ತೃಪ್ತಿಪಡಿಸುವುದು ಅಸಾಧ್ಯ. ಮಾಜಿ ಸೇನಾಧಿಕಾರಿಗಳು ಮತ್ತು ಮಾಜಿ ಯೋಧರು ಎತ್ತಿರುವ ಆಕ್ಷೇಪಗಳ ಬಗ್ಗೆ ಪರಿಶೀಲಿಸಲು ವಿಶೇಷ ಆಯೋಗವನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಪ್ರಮುಖ ವಿಷಯಗಳನ್ನು ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾಗಿದೆ. ಇನ್ನೂ ಏನಾದರು ಸಮಸ್ಯೆಗಳಿದ್ದರೆ ಆಯೋಗ ವಿಚಾರಿಸಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ತಮ್ಮ ಹಕ್ಕುಗಳ ಬಗ್ಗೆ ಬೇಡಿಕೆಯಿಡುವ ಸ್ವಾತಂತ್ರ್ಯವಿದೆ. ನಾವು ಪ್ರಮುಖ ಬೇಡಿಕೆಗಳನ್ನು ಈಡೇರಿಸಿದ್ದೇವೆ. ಆದರೆ ಪ್ರತಿಯೊಬ್ಬರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು.
ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳದ ಮಾಜಿ ಯೋಧರಿಗೆ ತಮ್ಮ ಪ್ರತಿಭಟನೆಯನ್ನು ಹಿಂಪಡೆಯುವಂತೆ ವಾಯುಸೇನೆ ಮುಖ್ಯಸ್ಥ ಅರುಪ್ ರಹಾ ಕರೆ ನೀಡಿದ್ದು, ಸಮಸ್ಯೆಗಳನ್ನು ಸದ್ಯದಲ್ಲಿಯೇ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಕಳೆದ ಶನಿವಾರ, ಸಮಾನ ಶ್ರೇಣಿ, ಸಮಾನ ವೇತನ ಯೋಜನೆಯನ್ನು ಪ್ರಕಟಿಸಿತ್ತು. ಆದರೆ ಅದರಲ್ಲಿ ಕೆಲವೊಂದು ಅಂಶಗಳನ್ನು ಕೈ ಬಿಡಲಾಗಿತ್ತು. ಸ್ವಯಂ ನಿವೃತ್ತಿ ಹೊಂದಿದವರನ್ನು ಯೋಜನೆಯ ಫಲಾನುಭವದಿಂದ ಹೊರಗಿಡಲಾಗಿದೆ.
ಆದರೆ ಮಾಜಿ ಯೋಧರು ಕಳೆದ 185 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು,ಯೋಜನೆಯ ಆದೇಶವನ್ನು ಪ್ರಸ್ತುತ ಇರುವ ಸ್ಥಿತಿಯಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.