ನವದೆಹಲಿ: ಗುರುವಾರ ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ಜಿಎಸ್ ಟಿ ಮಸೂದೆ ಅಂಗೀಕಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಸಹಕಾರ ನೀಡಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಮನವಿ ಮಾಡಿದ್ದಾರೆ.
ಜಿಎಸ್ ಟಿ ಮಸೂದೆ ಸೇರಿದಂತೆ ವಿವಿಧ ಮಸೂದೆಗಳಿಗೆ ಸಂಸತ್ತಿನಲ್ಲಿ ಅಂಗೀಕಾರ ಪಡೆಯುವ ಸಲುವಾಗಿ ಹಿರಿಯ ಸಚಿವರು ಈಗಾಗಲೇ ಸಭೆ ಸೇರಿದ್ದು ಹಲವು ಚರ್ಚೆಗಳನ್ನು ಮಾಡಿದ್ದಾರೆ. ಚರ್ಚೆ ಬಳಿಕ ಮಾತನಾಡಿರುವ ಪ್ರಧಾನಿ ಮೋದಿಯವರು, ಸರಕು ಮತ್ತು ಸೇವಾ ತೆರಿಗೆ ವಿಚಾರದಲ್ಲಿ ಇಡೀ ದೇಶದ ಜನತೆ ಸಾಕಷ್ಟು ಆಸಕ್ತಿಯನ್ನು ಹೊಂದಿದ್ದಾರೆ. ಜಿಎಸ್ ಟಿ ಕುರಿತಂತಿರುವ ಹಲವು ಅನುಮಾನಗಳನ್ನು ಈ ವೇಳೆ ವಿತ್ತ ಸಚಿವ ಅರುಣ್ ಜೇಟ್ಲಿ ಸ್ಪಷ್ಟನೆ ನೀಡುವ ಮೂಲಕ ಅನುಮಾನಗಳಿಗೆ ಉತ್ತರ ನೀಡಲಿದ್ದಾರೆ. ಸಂಸತ್ತು ಅಧಿವೇಶನ ಕುರಿತಂತೆ ಜನರಿಗೆ ಸಾಕಷ್ಟು ಆಸಕ್ತಿಯಿರುತ್ತದೆ. ಹೀಗಾಗಿ ಅಧಿವೇಶನವನ್ನು ಅರ್ಥಪೂರ್ಣವಾಗಿ ಮುನ್ನಡೆಸಬೇಕಿದೆ. ಜನರ ನಿರೀಕ್ಷೆಗಳನ್ನು ಪೂರ್ಣಗೊಳಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದ್ದಾರೆ.
ಪರಿಸರ ಸಚಿವ ಪ್ರಕಾಶ್ ಜವಡೇಕರ್ ಅವರು ಈಗಾಗಲೇ ಹಲವು ವಿಚಾರ ಕುರಿತಂತೆ ನಾಯಕರೊಂದಿಗೆ ಚರ್ಚೆ ನಡೆಸಿದ್ದು ಅಧಿವೇಶನದ ವೇಳೆ ವಾತಾವರಣ ಬದಲಾವಣೆ ವಿಚಾರ ಕುರಿತಂತೆ ಮಾತನಾಡಲಿದ್ದಾರೆ. ಈ ಬಗ್ಗೆ ಯಾರಿಗಾದರೂ ಯಾವುದೇ ಸಮಸ್ಯೆ ಹಾಗೂ ಸಲಹೆ ಇದ್ದರೆ ಹೇಳಬಹುದಾಗಿದೆ. ಇದೇ ವೇಳೆ ಜಿಎಸ್ ಟಿ ಕುರಿತಂತೆ ಜೆಡಿಯು ಮುಖ್ಯಸ್ಥ ಶರದ್ ಯಾದವ್ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿಕೊಂಡಿದ್ದಾರೆ.
ಅಧಿವೇಶನದಲ್ಲಿ ಗದ್ದಲವನ್ನುಂಟು ಮಾಡಲು ಕಾಂಗ್ರೆಸ್ ತಂತ್ರ
ನಾಳೆಯಿಂದ ಆರಂಭವಾಗಲಿರುವ ಸಂಸತ್ ಅಧಿವೇಶದಲ್ಲಿ ಅಸಹಿಷ್ಣುತೆಗೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿ ಕಾಂಗ್ರೆಸ್ ರಣತಂತ್ರವನ್ನು ರೂಪಿಸಿದೆ ಎಂದು ಹೇಳಲಾಗುತ್ತಿದ್ದು, ಅಧಿವೇಶನದ ವೇಳೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಸೇರಿದಂತೆ ಇನ್ನಿತರೆ ಪ್ರತಿಪಕ್ಷಗಳು ಕೂಡ ಈಗಾಗಲೇ ಸಿದ್ಧತೆಯನ್ನು ನಡೆಸಿದ್ದು, ಕೇಂದ್ರ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ತಂತ್ರ ರೂಪಿಸುತ್ತಿದೆ ಎಂದು ತಿಳಿದುಬಂದಿದೆ.
ಪ್ರತಿಪಕ್ಷಗಳ ತಂತ್ರಕ್ಕೆ ಪ್ರತಿತಂತ್ರವನ್ನು ಇದೀಗ ಬಿಜೆಪಿ ಕೂಡ ಹೆಣೆದಿದ್ದು, ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಅಸಹಿಷ್ಣುತೆ ವಿಚಾರವನ್ನು ಪ್ರಸ್ತಾಪಿಸಲು ಹಠ ಹಿಡಿದಿದ್ದೇ ಆದರೆ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ದ್ವಿಪೌರತ್ವ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ದಾಳಿ ನಡೆಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.