ನವದೆಹಲಿ: 3 ದಿನಗಳ ಭಾರತ ಪ್ರವಾಸದಲ್ಲಿರುವ ಜರ್ಮನ್ ಚಾನ್ಸಲರ್ ಏಂಜೆಲಾ ಮಾರ್ಕೆಲ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಪರಸ್ಪರ ಪ್ರಮುಖ 18 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.
3 ದಿನಗಳ ಪ್ರವಾಸ ನಿಮಿತ್ತ ಭಾರತಕ್ಕೆ ಆಗಮಿಸಿರುವ ಜರ್ಮನ್ ಚಾನ್ಸಿಲರ್ ಏಂಜೆಲಾ ಮಾರ್ಕೆಲ್ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಚರ್ಚಿಸಿದರು. ಈ ವೇಳೆ ಉನ್ನತ ಶಿಕ್ಷಣ, ನಾಗರಿಕ ವಿಮಾನಯಾನ, ರೈಲ್ವೆ ಮತ್ತು ಆಹಾರ ಸುರಕ್ಷತೆ ಸೇರಿದಂತೆ ವಿವಿಧ ವಿಭಾಗಗಳಿಗೆ ಸಂಬಂಧಿಸಿದ ಒಟ್ಟು 18 ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಹಾಕಿದ್ದಾರೆ. ಇನ್ನು ಸಭೆ ಬಳಿಕ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ವಿಶ್ವದಲ್ಲಿ ಸಾಕಷ್ಟು ಎಲ್ಲ ವಿಭಾಗಗಳಲ್ಲಿಯೂ ಅನಿಯಮಿತ ಸ್ಪರ್ಧೆ ಇದ್ದು, ಅವಕಾಶಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಜರ್ಮನಿ ದೇಶಗಳು ಉತ್ತಮ ಪಾಲುದಾರರಾಗಬಲ್ಲವು ಎಂದು ಅಭಿಪ್ರಾಯಪಟ್ಟಿದ್ದಾರೆ.
ದ್ವಿಪಕ್ಷೀಯ ಸಂಬಂಧ ವೃದ್ಧಿ ಮತ್ತು ರಕ್ಷಣಾ ಸಾಮಗ್ರಿಗಳ ಉತ್ಪಾದನಾ ಕ್ಷೇತ್ರ, ವ್ಯಾಪಾರ ವಹಿವಾಟು, ಶುದ್ಧ ಇಂಧನ ಮೂಲ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸುವ ನಿಟ್ಟಿನಲ್ಲಿ 18 ಒಪ್ಪಂದಗಳಿಗೆ ಭಾರತ ಮತ್ತು ಜರ್ಮನಿ ಸಹಿ ಹಾಕಿವೆ. ಉಭಯ ನಾಯಕರು ಎರಡೂ ರಾಷ್ಟ್ರಗಳ ನಡುವೆ ಸಹಕಾರವನ್ನು ಹೆಚ್ಚಿಸಲು ಮತ್ತು ಕೆಲವೊಂದು ಮುಖ್ಯ ಕ್ಷೇತ್ರಗಳಲ್ಲಿ ಪಾಲುದಾರಿಕೆಯನ್ನು ಹೆಚ್ಚಿಸುವ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ರಕ್ಷಣಾ ಸಾಮಗ್ರಿಗಳ ಉತ್ಪಾದನೆ, ಉನ್ನತ ತಂತ್ರಜ್ಞಾನಗಳ ವಿನಿಮಯ, ಗುಪ್ತಚರ ವಿಭಾಗ, ಭಯೋತ್ಪಾದನೆ ಮತ್ತು ಉಗ್ರವಾದದ ವಿರುದ್ಧ ಹೋರಾಟ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಇನ್ನು ಈ ಭೇಟಿಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ "ಮೇಕ್ ಇನ್ ಇಂಡಿಯಾ"ಗೆ ಚೇತನ ತಂದಿದ್ದು, ಪ್ರಸ್ತುತ ಉಭಯ ನಾಯಕರ ಸಹಿ ಹಾಕಿರುವ ಒಪ್ಪಂದದಂತೆ ಜರ್ಮನಿಯ ಪ್ರಮುಖ ಕಂಪನಿಗಳು ಏಷ್ಯಾದ 3ನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾದ ಭಾರತದಲ್ಲಿ ಬಂಡವಾಳ ತೊಡಗಿಸಲಿವೆ. ಅಲ್ಲದೆ ಈ ವಿನೂತನ ಉದ್ಯೋಗಾವಕಾಶಗಳ ಸಂಖ್ಯೆ ಹೆಚ್ಚಾಗಲಿದ್ದು, ಕೌಶಲ್ಯಭರಿತ ಉದ್ಯೋಗಗಳಿಗೆ ಬೇಡಿಕೆ ಹೆಚ್ಚಾಗಲಿದೆ ಎಂಬ ಅಭಿಪ್ರಾಯವೂ ಕೇಳಿಬಂದಿದೆ.
ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನಮಾನಕ್ಕೆ ಸಂಬಂಧಿಸಿ ಭಾರತ-ಜರ್ಮನಿ ಎರಡೂ ರಾಷ್ಟ್ರಗಳು ಪ್ರತಿಪಾದಿಸುತ್ತಿರುವ ಹಿನ್ನೆಲೆಯಲ್ಲಿ ಮಾರ್ಕೆಲಾ ಅವರ ಈ ಭೇಟಿ ಹೆಚ್ಚು ನಿರೀಕ್ಷೆ ಹುಟ್ಟುಹಾಕಿದ್ದು, ಈ ಸಂಬಂಧ ಉಭಯನಾಯಕರ ನಡುವೆ ಮಾತುಕತೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.