ಮೋದಿ ಜತೆ ಗುಲಾಂ ಅಲಿ (ಕೃಪೆ: ಟ್ವಿಟರ್ )
ನವದೆಹಲಿ: ಮುಂಬೈನಲ್ಲಿ ನಡೆಯಬೇಕಿದ್ದ ಪಾಕಿಸ್ತಾನಿ ಗಾಯಕ ಗುಲಾಂ ಅಲಿ ಅವರ ಪ್ರದರ್ಶನಕ್ಕೆ ಶಿವಸೇನೆ ವಿರೋಧ ವ್ಯಕ್ತಪಡಿಸಿ,ಕಾರ್ಯಕ್ರಮ ರದ್ದುಗೊಳಿಸಿದ್ದು ಗೊತ್ತೇ ಇದೆ. ಪಾಕಿಸ್ತಾನ ಭಾರತ ನಡುವೆ ಗುಂಡಿನ ದಾಳಿ, ಭಯೋತ್ಪಾದನೆ ಇವೆಲ್ಲವನ್ನೂ ಪಾಕ್ ಕೊನೆಗೊಳಿಸುವ ವರಗೆ ರಾಜಕೀಯ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪಾಕ್‌ನವರಿಗೆ ಅವಕಾಶ ಕೊಡುವುದಿಲ್ಲ ಎಂದು ಶಿವಸೇವೆ ಗುಲಾಂ ಅಲಿ ಅವರ ಸಂಗೀತ ಕಾರ್ಯಕ್ರಮ ರದ್ದು ಮಾಡಿತ್ತು.
ಖ್ಯಾತ ಗಜಲ್ ಗಾಯಕ ಗುಲಾಂ ಅಲಿ ಅವರಿಗೆ ಭಾರತದಲ್ಲಿ ಹಲವಾರು ಅಭಿಮಾನಿಗಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡಾ ಗುಲಾಂ ಅಲಿ ಅವರ ಅಭಿಮಾನಿ.
ಪ್ರಸ್ತುತ ವರ್ಷಾರಂಭದಲ್ಲಿ ಮೋದಿಯವರ ಚುನಾವಣಾ ಕ್ಷೇತ್ರವಾದ ವಾರಣಾಸಿಯಲ್ಲಿ ಗುಲಾಂ ಅಲಿ ಸಂಗೀತ ಕಚೇರಿ ನಡೆಸಿದ್ದರು. ಈ ಕಾರ್ಯಕ್ರಮಕ್ಕೆ ಮೋದಿಯವರಿಗೆ ಹೋಗಲಾಗಲಿಲ್ಲ. ಕಾರ್ಯಕ್ರಮ ತಪ್ಪಿಸಿಕೊಂಡಿದ್ದಕ್ಕೆ ಬೇಸರ ವ್ಯಕ್ತ ಪಡಿಸಿ ಮೋದಿ ಟ್ವೀಟ್ ಕೂಡಾ ಮಾಡಿದ್ದರು.
ಹಿಂದೂಸ್ತಾನಿ ಸಂಗೀತಗಾರನಾಗಿ ಖ್ಯಾತರಾಗಿರುವ ಗುಲಾಂ ಅಲಿಯವರು ಭಾರತದಲ್ಲಿ ಚಿರ ಪರಿಚಿತರು. ಹಲವಾರು ಬಾಲಿವುಡ್ ಹಾಡುಗಳನ್ನೂ ಇವರು ಹಾಡಿದ್ದಾರೆ. ಅವರ ಗಜಲ್‌ಗಳನ್ನು ಆಸ್ವಾದಿಸುವ ಜನರು ಭಾರತದಲ್ಲೇ ಜಾಸ್ತಿ.
ಏತನ್ಮಧ್ಯೆ, ಯಾವುದೇ ಪಾಕಿಸ್ತಾನಿ ಕಲಾವಿದನಿಗೆ ಇಲ್ಲಿ ಕಚೇರಿ ನಡೆಸಲು ಅವಕಾಶ ನೀಡುವುದಿಲ್ಲ. ಒಂದು ವೇಳೆ ನಮ್ಮ ಮಾತು ಧಿಕ್ಕರಿಸಿದರೆ ತಕ್ಕ ಬೆಲೆ ತೆರಬೇಕಾದೀತು ಎಂದು ಶಿವಸೇನೆ ಗುಡುಗಿತ್ತು.