ದೇಶ

ಗೀತಾ ಹೆತ್ತವರ ಕೂಡುವ ಕಾಲ ಬಂತು

ಕರಾಚಿ: ಅಕಸ್ಮಾತಾಗಿ ಭಾರತದ ಗಡಿ ದಾಟಿ ಪಾಕಿಸ್ತಾನ ಸೇರಿದ್ದ ಕಿವುಡಿ ಮೂಕಿ ಯುವತಿ ಗೀತಾ ಕೊನೆಗೂ ತನ್ನ ಹೆತ್ತವರ ಮಡಿಲು ಸೇರುವ ಕಾಲ ಸನ್ನಿಹಿತವಾಗಿದೆ.

ಬಿಹಾರದಲ್ಲಿರುವ ತನ್ನ ಕುಟುಂಬವನ್ನು ಗೀತಾ ಗುರುತು ಹಿಡಿದಿದ್ದು, ದಾಖಲೆಗಳೆಲ್ಲ ಸಿದ್ಧವಾದೊಡನೆ ಆಕೆ ಬರೋಬ್ಬರಿ 12 ವರ್ಷಗಳ ಪಾಕ್ ವಾಸದ ಬಳಿಕ ತಾಯಿನಾಡಿಗೆ ಮರಳಲಿದ್ದಾಳೆ. ಇಸ್ಲಾಮಾಬಾದ್ನಲ್ಲಿರುವ ಭಾರತೀಯ ಹೈಕಮಿಷನ್ ಗೀತಾಳ ಕುಟುಂಬವನ್ನು ಪತ್ತೆ ಹಚ್ಚುವ ಸಲುವಾಗಿ ಹಲವಾರು ಫೋಟೋಗಳನ್ನು ಕಳುಹಿಸಿತ್ತು.

ಗೀತಾ ತನ್ನ ತಂದೆ, ಮಲತಾಯಿ ಹಾಗೂ ಸೋದರರನ್ನು ಗುರುತು ಹಿಡಿದಿದ್ದಾಳೆ. ಡಿಎನ್‍ಎ ಪರೀಕ್ಷೆಯ ಬಳಿಕ ಆಕೆಯನ್ನು ಭಾರತಕ್ಕೆ ಕರೆಸಿಕೊಳ್ಳಲಾಗುವುದು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗುರುವಾರ ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.

ಸೋಮವಾರ ಆಗಮನ?:
ಬಿಹಾರದಲ್ಲಿರುವ ಆಕೆಯ ಕುಟುಂಬವು ಸದ್ಯ ದೆಹಲಿಗೆ ಬಂದಿದೆ. ಒಂದು ಮೂಲದ ಪ್ರಕಾರ, ಗೀತಾ ಸೋಮವಾರವೇ ಕರಾಚಿಯಿಂದ ದೆಹಲಿ ವಿಮಾನದಲ್ಲಿ
ಆಗಮಿಸಲಿದ್ದಾಳೆ. ಆಕೆಯೊಂದಿಗೆ ಪಾಕ್ ನಲ್ಲಿ ಆಕೆಯ ತಾಯಿಯಾಗಿದ್ದ ಇಧಿ ಫೌಂಡೇಷನ್‍ನ ಬಿಲ್ಕಿಸ್ ಇಧಿ ಅವರೂ ಭಾರತಕ್ಕೆ ಆಗಮಿಸುವ ಸಾಧ್ಯತೆಯಿದೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ `ಭಜರಂಗಿ ಭಾಯಿಜಾನ್' ಬಿಡುಗಡೆಯಾದ ಬಳಿಕ ಈ ಸಿನಿಮಾದ ಮಾದರಿಯನ್ನೇ ಹೋಲುವ ಗೀತಾಳ ವಿಚಾರ ಬೆಳಕಿಗೆ ಬಂದಿತ್ತು. ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಹಾಗೂ ಭಾರತ ಸರ್ಕಾರ ಗೀತಾಳನ್ನು ವಾಪಸ್ ತರುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿದವು.

SCROLL FOR NEXT