ದೇಶ

2010ರ ವರದಿಗೆ ಮಾನ್ಯತೆ ಕೊಡಲ್ಲ

Rashmi Kasaragodu
ನವದೆಹಲಿ: ಮಹಾನದಿಗೋದಾವರಿ ನದಿಪಾತ್ರದ ಹೆಚ್ಚುವರಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಶೂನ್ಯಪಾಲು ನೀಡಿದ್ದ 2010ರ ವರದಿಯನ್ನು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ(ಎನ್‍ಡಬ್ಲ್ಯೂಡಿಎ) ಹಿಂದಕ್ಕೆ ಪಡೆದಿದೆ ಎಂದು ಕೇಂದ್ರ ಜಲಸಂಪನ್ಮೂಲ ಇಲಾಖೆ ಸ್ಪಷ್ಟಪಡಿಸಿದೆ. ಎನ್‍ಡಬ್ಲ್ಯೂಡಿಎ ಜಲ ಸಮತೋಲನ ವರದಿಯನ್ನು ಲಭ್ಯ ನೀರಿನ ಮರು ಅಂದಾಜು ಮಾಡಿ ಇತ್ತೀಚಿನ ಅಂಕಿ ಅಂಶಗಳನ್ನೊಳಗೊಂಡಂತೆ ಮರು ಪರಿಷ್ಕರಿಸಲಿದೆ. ನಂತರ ಭಾಗೀದಾರ ರಾಜ್ಯಗಳಿಗೆ ಹಂಚಿಕೆ ಮಾಡಲಿದೆ. 2010ರಲ್ಲಿ ನೀರು ಹಂಚಿಕೆ ಸಂಬಂಧದ ಅಂಕಿ ಅಂಶಗಳನ್ನೊಳಗೊಂಡ ವರದಿಗೆ ಮಾನ್ಯತೆ ಇಲ್ಲ ಎಂದು ಇಲಾಖೆ ತಿಳಿಸಿದೆ. ಹೆಚ್ಚುವರಿ ನೀರನ್ನು ಜಲ ನ್ಯಾಯಾಧಿಕರಣಗಳು ಮಾಡಿರುವ ಹಂಚಿಕೆ ಸೂತ್ರದಂತೆಯೇ ಮರು ಹಂಚಿಕೆ ಮಾಡಲಾಗುತ್ತದೆ. ಇಷ್ಟಾಗಿಯೂ ಕರ್ನಾಟಕ ಸರ್ಕಾರಕ್ಕೆ ಯಾವುದೇ ತರಕಾರುಗಳಿದ್ದರೂ, ಅಂತಾರಾಜ್ಯ ಜಲವಿವಾದಕಾಯ್ದೆ 1956ರ ಅಡಿಯಲ್ಲಿ ಕೇಂದ್ರಕ್ಕೆ ಮನವಿ ಸಲ್ಲಿಸಬಹುದು.
ಕೇಂದ್ರ ಸರ್ಕಾರವು ಇಂತಹ ತಕರಾರುಗಳನ್ನು ನದಿಪಾತ್ರದ ರಾಜ್ಯಗಳ ನಡುವೆ ಸೌಹಾರ್ದಯುತವಾಗಿ ಪರಿಹರಿಸಲು ಪ್ರಯತ್ನಿಸುತ್ತದೆ. ಅದು ಸಾಧ್ಯವಾಗದೇ ಇದ್ದಾಗ ತರಕಾರು ಇತ್ಯರ್ಥಕ್ಕೆ ನ್ಯಾಯಾಧಿಕರಣ ರಚನೆ ಮಾಡಲಿದೆ ಎಂದು ವಿವರಿಸಿದೆ. ಹೆಚ್ಚುವರಿ ನೀರು ಹಂಚಿಕೆಯನ್ನು ಎಲ್ಲ ರಾಜ್ಯಗಳಿಗೂ ಸಮಾನಪಾಲು ನೀಡಬೇಕು ಎಂಬ ಕರ್ನಾಟಕದ ವಾದವನ್ನು ಕೇಂದ್ರ ಜಲಸಂಪನ್ಮೂಲ ಇಲಾಖೆ ಸಂಪೂರ್ಣವಾಗಿ ಒಪ್ಪಿದೆ. ಸೆ. 15ರಂದು ನಡೆದ ಅಂತರ ನದಿಗಳ ಸಂಪರ್ಕಕ್ಕಾಗಿ ಇರುವ ಉನ್ನತ ಮಟ್ಟದ ಸಮಿತಿಯಲ್ಲಿ ಕರ್ನಾಟಕದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಮಹಾನದಿ ಗೋದಾವರಿ ನದಿಪಾತ್ರದ ಹೆಚ್ಚುವರಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಆಕ್ಷೇಪಿಸಿದ್ದರು. 1980ರಲ್ಲಿ 283 ಟಿಎಂಸಿ ನೀರು ನಿಗದಿಯಾಗಿದ್ದು, 2000ದಲ್ಲಿ ಈ ಪ್ರಮಾಣವನ್ನು 164 ಟಿಎಂಸಿಗೆ ತಗ್ಗಿಸಲಾಗಿತ್ತು. 2010ರಲ್ಲಿ ಸಲ್ಲಿಸಿದ ವರದಿಯಲ್ಲಿ ಕರ್ನಾಟಕಪಾಲು ಶೂನ್ಯಕ್ಕೆ ಇಳಿದಿತ್ತು. ಈ ಬಗ್ಗೆ ರಾಜ್ಯ ಸರ್ಕಾರ ಆಕ್ಷೇಪ ಎತ್ತಿದರೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸಚಿವರು ಲಿಖಿತವಾಗಿ ಆಕ್ಷೇಪ ಸಲ್ಲಿಸಿದ್ದರು. ಕರ್ನಾಟಕ ಸಲ್ಲಿಸಿರುವ ಎಲ್ಲ ಆಕ್ಷೇಪಗಳಿಗೆ ಉತ್ತರನೀಡಿರುವ ಜಲಸಂಪನ್ಮೂಲ ಇಲಾಖೆ 2010ರ ವರದಿಯನ್ನು ಎನ್‍ಡಬ್ಲ್ಯೂಡಿಎ 2011ರಲ್ಲಿ ವಾಪಸ್ ಪಡೆದಿರುವುದರಿಂದ ಕರ್ನಾಟಕದ ಪಾಲು ಶೂನ್ಯಕ್ಕೆ ಇಳಿದಿದೆ ಎಂಬ ಅಂಕಿ ಅಂಶಗಳಿಗೆ ಮಾನ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಕರ್ನಾಟಕಕ್ಕೆ ಈಗ 2000ರಲ್ಲಿ ನಿಗದಿಯಾದ 164 ಟಿಎಂಸಿ ನೀರು ಲಭ್ಯವಾಗುತ್ತದೋ ಅಥವಾ ಎನ್ ಎನ್‍ಡಬ್ಲ್ಯೂಡಿಎ ಹೊಸದಾಗಿ ಅಂದಾಜು ಮಾಡುವ ವರದಿಯಾಧರಿಸಿ ಮರು ನಿಗದಿ ಮಾಡಲಾಗುತ್ತದೆಯೋ ಕಾದು ನೋಡಬೇಕಾಗಿದೆ. ನದಿ ಜೋಡಣೆಯ ನಂತರ ಲಭ್ಯವಾಗುವ ಹೆಚ್ಚುವರಿ ನೀರಿನ ಆಧಾರದ ಮೇಲೆ ಹಂಚಿಕೆ ನಡೆಯಲಿದೆ. ನ್ಯಾಯಾಧಿಕರಣವೂ ನೀರು ಹಂಚಿಕೆ ಮಾಡುವಾಗ ಕರ್ನಾಟಕಕ್ಕೆ ನ್ಯಾಯ ಒದಗಿಸಿಲ್ಲ ಎಂಬ ಅಂಶವನ್ನು ಪ್ರಸ್ತಾಪ ಮಾಡಲಾಗಿತ್ತು. ಆದರೆ, ಜಲಸಂಪನ್ಮೂಲ ಇಲಾಖೆ, ಹೆಚ್ಚುವರಿ ನೀರನ್ನೂ ನ್ಯಾಯಧಿಕರಣದ ಹಂಚಿಕೆ ಸೂತ್ರದಡಿಯೇ ಮರು ಹಂಚಿಕೆ ಮಾಡುವುದಾಗಿ ಹೇಳಿದೆ.ನದಿ ಜೋಡಣೆ ಯೋಜನೆ ಮಾಡುವಾಗ ಕಾವೇರಿ ಮತ್ತು ಕೃಷ್ಣಾ ಪ್ರದೇಶದ ಬರಪೀಡಿತ ಪ್ರದೇಶವನ್ನು ನಿರ್ಲಕ್ಷಿಸಲಾಗಿದೆ ಎಂಬ ಆಕ್ಷೇಪಕ್ಕೆ ಉತ್ತರಿಸಿರುವ ಕೇಂದ್ರವು, ಎತ್ತರದಲ್ಲಿರುವುದರಿಂದ ಆ ಭಾಗಗಳನ್ನು ಒಳಗೊಳ್ಳಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಬೆಂಗಳೂರಿನ ಮೂರನೇ ಎರಡರಷ್ಟು ಭಾಗ  ಪೊನ್ನಯ್ಯಾರ್  ಕಣಿವೆಗೆ ಸೇರುತ್ತದೆ. ಆದರೆ, ನಗರಕ್ಕೆ ಕಾವೇರಿ ಪಾಲಿನಲ್ಲಿ 9.57 ಟಿಎಂಸಿ ಒದಗಿಸುತ್ತಿದೆ. ಹೀಗಾಗಿ ಈ ಭಾಗದಲ್ಲಿ ಬಳಕೆ ಮಾಡಿದ ನೀರನ್ನು ಮರು ಬಳಕೆ ಮಾಡುವ ಹಕ್ಕು ಕರ್ನಾಟಕಕ್ಕೆ ಸೇರಬೇಕು ಎಂಬ ಬೇಡಿಕೆಯನ್ನು ಕೇಂದ್ರ ಜಲ ಸಂಪನ್ಮೂಲ ಇಲಾಖೆ ಒಪ್ಪಿದೆ. ಪೊನ್ನಯ್ಯಾರ್ ಪಾಲಾರ್ ಅಂತರರಾಜ್ಯ ನದಿ ಸಂಪರ್ಕ ಯೋಜನೆ ಅಂತಿಮ ಹಂತದಲ್ಲಿದ್ದು,
ವಿವರಗಳನ್ನು ಸಾಧ್ಯವಾದಷ್ಟು ಬೇಗ ಕರ್ನಾಟಕ ಸರ್ಕಾರಕ್ಕೆಒದಗಿಸಲಾಗುವುದು ಎಂದೂ ತಿಳಿಸಿದೆ.
SCROLL FOR NEXT