ಭೋಪಾಲ್: ಅತ್ಪ ವಿರಾಮದ ನಂತರ ಮಧ್ಯಪ್ರದೇಶದ ವ್ಯಾಪಂ ಹಗರಣ ಮತ್ತೆ ಸುದ್ದಿಯಾಗುತ್ತಿದ್ದು, ಒಡಿಶಾದಲ್ಲಿ ಮತ್ತೊಂದು ನಿಗೂಢ ಸಾವಿನ ವರದಿಯಾಗಿದೆ.
ಮಾಧ್ಯಮಗಳಿಗೆ ಸಿಕ್ಕಿರುವ ಮಾಹಿತಿ ಪ್ರಕಾರ, ನಿವೃತ್ತ ಐಎಫ್ ಎಸ್ ಅಧಿಕಾರಿ ವಿಜಯ್ ಬಹದ್ದೂರ್ ಅವರ ಮೃತದೇಹ ಒಡಿಶಾದ ಜರ್ಸುಗುಡ ರೈಲ್ವೆ ಹಳಿ ಬಳಿ ಮೊನ್ನೆ ಗುರುವಾರ ಪತ್ತೆಯಾಗಿದೆ.
ವ್ಯಾಪಂ ನಡೆಸಿದ ಎರಡು ನೇಮಕಾತಿ ಪರೀಕ್ಷೆಯಲ್ಲಿ ವಿಜಯ್ ಬಹದ್ದೂರ್ ಅವರು ವೀಕ್ಷಕರಾಗಿ ಕೆಲಸ ಮಾಡಿದ್ದರು. 1978ರ ಬ್ಯಾಚಿನ ಐಎಫ್ಎಸ್ ಅಧಿಕಾರಿಗಳ ಪುನರ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಹದ್ದೂರ್ ಅವರು ಒಡಿಶಾದ ಪುರಿಗೆ ತಮ್ಮ ಪತ್ನಿ ನೀತಾ ಸಿಂಗ್ ಜೊತೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಭೋಪಾಲ್ ಗೆ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಆದರೆ ಮೃತದೇಹದ ಮರಣೋತ್ತರ ಪರೀಕ್ಷೆ ಇನ್ನು ನಡೆಯಬೇಕಾಗಿದೆ. ವರದಿಯ ಆಧಾರದ ಮೇಲೆ ತನಿಖೆ ಮುಂದುವರಿಯಲಿದೆ ಎಂದು ಜರ್ಸುಗುಡಾದ ಉಹ ಪೊಲೀಸ್ ಆಯುಕ್ತ ದಿಲೀಪ್ ಬಾಗ್ ತಿಳಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಹದ್ದೂರ್ ಪತ್ನಿ ನೀತಾ ಸಿಂಗ್, ತಮ್ಮ ಪತಿ ರೈಲಿನಲ್ಲಿ ಎಸಿ ಬೋಗಿಯ ಬಾಗಿಲನ್ನು ಮುಚ್ಚಲು ಹೋದವರು ಹಿಂತಿರುಗಿ ಬರಲಿಲ್ಲ. ಜರ್ಸುಗುಡಾದಿಂದ ಸುಮಾರು 70 ಕಿಮೀ ದೂರದಲ್ಲಿರುವ ರಾಯ್ ಗಢ್ ನಿಲ್ದಾಣದ ಬಳಿ ಅವರು ಕಾಣೆಯಾದರು ಎಂದು ತಿಳಿಸಿದ್ದಾರೆ.
2012ರಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ನಮ್ರತಾ ದಮೋರ್ ಎಂಬಾಕೆಯ ಶವ ಉಜ್ಜಯಿನಿ ಸಮೀಪ ರೈಲ್ವೆ ಹಳಿ ಬಳಿ ಸಿಕ್ಕಿದ ರೀತಿಯಲ್ಲಿ ಬಹದ್ದೂರ್ ಶವ ಕೂಡ ಸಿಕ್ಕಿದೆ.
ತೀವ್ರ ಒತ್ತಡ, ಪ್ರತಿಭಟನೆ ಬಳಿಕ ವ್ಯಾಪಂ ಹಗರಣಕ್ಕೆ ಸಂಬಂಧಪಟ್ಟ ಎಲ್ಲಾ ಕೇಸುಗಳನ್ನು ಮಧ್ಯಪ್ರದೇಶ ಸರ್ಕಾರ ಇತ್ತೀಚೆಗೆ ಸಿಬಿಐಗೆ ವಹಿಸಿತ್ತು. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ ನಂತರ ನಿಗೂಢವಾಗಿ ಸಾವನ್ನಪ್ಪುವವರ ಸಂಖ್ಯೆ ನಿಂತುಹೋಗಿದೆ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ಹೇಳಿತ್ತು.
ವ್ಯಾಪಂ ಹಗರಣದ ತನಿಖೆಯ ಪ್ರಮುಖ ಸಾಕ್ಷಿಗಳನ್ನು ನಾಶಪಡಿಸಲು ನಿಗೂಢವಾಗಿ ಕೊಲ್ಲುವ ಪಿತೂರಿ ನಡೆಯುತ್ತಿದೆ ಎಂದು ಮಧ್ಯಪ್ರದೇಶ ಸರ್ಕಾರದ ಪ್ರತಿಪಕ್ಷಗಳು ಆರೋಪಿಸುತ್ತಿವೆ.