ದೇಶ

ಪಂಜಾಬ್ ನಲ್ಲಿ ವಿಧ್ವಂಸಕ ಕೃತ್ಯವೆಸಗಲು ಉಗ್ರರ ಸಂಚು: ಗುಪ್ತಚರ ಇಲಾಖೆ ಮಾಹಿತಿ

ಚಂಡೀಗಢ: ಪಾಕಿಸ್ತಾನ ಗುಪ್ತಚರ ಇಲಾಖೆ ಹಾಗೂ ಐಎಸ್ಐ ಸಂಸ್ಥೆಗಳು ಪಂಜಾಬ್ ನಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದು, ಪಂಜಾಬ್ ನಾದ್ಯಂತ ತೀವ್ರ ರೀತಿಯ ಕಟ್ಟೆಚ್ಚರವಹಿಸುವಂತೆ ಅಧಿಕಾರಿಗಳಿಗೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ ಎಂದು ಬುಧವಾರ ತಿಳಿದುಬಂದಿದೆ.

ಈ ಬಗ್ಗೆ ಖಾಸಗಿ ಮಾಧ್ಯಮವೊಂದು ವರದಿ ಮಾಡಿದ್ದು, ವರದಿಯಲ್ಲಿ ಉಗ್ರರ ದಾಳಿ ಕುರಿತಂತೆ ಈಗಾಗಲೇ ಅಧಿಕಾರಿಗಳಿಗೆ ಗುಪ್ತಚರ ಇಲಾಖೆ ಅಕ್ಟೋಬರ್ 1 ರಂದು ಪತ್ರವೊಂದನ್ನು ರವಾನೆ ಮಾಡಿದ್ದು, ಪತ್ರದಲ್ಲಿ ಪಾಕಿಸ್ತಾನ ಗುಪ್ತಚರ ಇಲಾಖೆ ಹಾಗೂ ಐಎಸ್ಐ ಸಂಸ್ಥೆಗಳು ಸೇರಿ ಪಂಜಾಬ್ ನಲ್ಲಿ ವಿಧ್ವಂಸಕ ಕೃತ್ಯವೆಸಗಲು ಈಗಾಗಲೇ ಸಂಚು ರೂಪಿಸಿದ್ದು, ತರಬೇತಿ ಪಡೆದ ಉಗ್ರರನ್ನು ಸಿಕ್ಖರ ವೇಷದಲ್ಲಿ ಪಂಜಾಬ್ ಗೆ ಕಳುಹಿಸಿದ್ದಾರೆಂದು ಹೇಳಿದೆ.

ಸುಮಾರು 15-20 ಉಗ್ರರನ್ನು ಈಗಾಗಲೇ ಉಗ್ರ ಸಂಸ್ಥೆಗಳು ಪಾಕಿಸ್ತಾನದಿಂದ ಪಂಜಾಬ್ ಗೆ ಕಳುಹಿಸಿದ್ದು, ಈ ಉಗ್ರರು ಮುಂಬೈ ಸರಣಿ ಬಾಂಬ್ ಸ್ಪೋಟದ ಪ್ರಮುಖ ಸಂಚುಕೋರನಾದ ಹಫೀಜ್ ಸಯೀದ್ ನಿಂದ ತರಬೇತಿ ಪಡೆದಿರುವ ಉಗ್ರರಾಗಿದ್ದಾರೆ. ಉಗ್ರರಿಗೆ ತರಬೇತಿಯಲ್ಲಿ ಸಿಕ್ಖರ ಸಂಸ್ಕೃತಿ ಹಾಗೂ ಅವರ ಪದ್ಧತೆ ಕುರಿತಂತೆ ಕಳೆದೆರಡು ತಿಂಗಳಿಂದ ತರಬೇತಿ ನೀಡಲಾಗಿದೆ ಎಂದು ಹೇಳಿಕೊಂಡಿದೆ.

ಪಂಜಾಬ್ ಭಂತಿಡಾ ಜಿಲ್ಲೆಯ ಮೆಹ್ರಾಜ್ ಗ್ರಾಮದಲ್ಲಿ ಸಿಕ್ಖರ ಪವಿತ್ರ ಗುರುಗ್ರಂಥ ಸಾಹಿಬ್ ಅನ್ನು ಕಿಡಿಗೇಡಿಗಳು ಹರಿದು ಹಾಕಿದ್ದು, ಗ್ರಂಥವನ್ನು ಅಪವಿತ್ರಗೊಳಿಸಿದ್ದಾರೆಂದು ಮಂಗಳವಾರ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪಂಜಾಬ್ ನಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಸಿಕ್ಖರ ಈ ಪ್ರತಿಭಟನೆಯೂ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಪ್ರತಿಭಟನೆಯಿಂದಾಗಿ ಈಗಾಗಲೇ ಪಂಜಾಬ್ ನ ಹಲವು ಹೆದ್ದಾರಿ ಸಂಪರ್ಕ ಅಸ್ತವ್ಯಸ್ತಗೊಂಡಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಪಂಜಾಬ್ ನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.  ಈ ಪ್ರತಿಭಟನೆಯನ್ನೇ ದಾಳವಾಗಿಸಿಕೊಳ್ಳಲು ಯತ್ನ ನಡೆಸುತ್ತಿರುವ ಉಗ್ರ ಸಂಘಟನೆಗಳು ಪಂಜಾಬ್ ನಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸುತ್ತಿದ್ದಾರೆಂದು ಗುಪ್ತಚರ ಇಲಾಖೆ ಹೇಳಿದೆ.

ಸಿಕ್ಖರ ಪವಿತ್ರ ಗುರು ಗ್ರಂಥವನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ ಪಂಜಾಪ್ ಪೊಲೀಸರು ಫರೀದ್ ಕೋಟ್ ಜಿಲ್ಲೆಯ ಬರ್ಗಾರಿ ಗ್ರಾಮದಲ್ಲಿ ನಿನ್ನೆಯಷ್ಟೇ ಇಬ್ಬರನ್ನು ಬಂಧನಕ್ಕೊಳಪಡಿಸಿದ್ದರು.

ಬಂಧಿತ ಆರೋಪಿಗಳನ್ನು ರೂಪೀಂದರ್ ಸಿಂಗ್ ಮತ್ತು ಆತನ ಸಹೋದರ ಜಸ್ವೀಂದರ್ ಎಂದು ಗುರ್ತಿಸಲಾಗಿದ್ದು, ಆರೋಪಿಗಳು ದುಂಬೈ ಮತ್ತು ಆಸ್ಟ್ರೇಲಿಯಾದೊಂದಿಗೆ ನಂಟುಹೊಂದಿರುವುದಾಗಿ ತಿಳಿದುಬಂದಿದ್ದು,  ಇಬ್ಬರು ಆರೋಪಿಗಳು ಗ್ರಂಥವನ್ನು ಅಪವಿತ್ರಗೊಳಿಸಿರುವ ವಿಷಯವು ಇವರ ಫೋನ್ ಸಂಭಾಷಣೆಯನ್ನು ಕದ್ದಾಲಿಸಿದ ನಂತರವಷ್ಟೇ ಅಧಿಕಾರಿಗಳಿಗೆ ತಿಳಿದುಬಂದಿದೆ.

ಆರೋಪಿಗಳ ಕುರಿತಂತೆ ಮಾಹಿತಿ ನೀಡಿರುವ ಅಧಿಕಾರಿಗಳು, ಬಂಧಿತ ಆರೋಪಿಗಳು ದುಬೈ ಹಾಗೂ ಆಸ್ಟ್ರೇಲಿಯದೊಂದಿಗೆ ನಂಟು ಹೊಂದಿರುವುದಾಗಿ ತಿಳಿದುಬಂದಿದೆ. ಮಾತ್ರವಲ್ಲದೆ, ಈ ಆರೋಪಿಗಳು ಫೋನ್ ಸಂಭಾಷಣೆಯ ಮೂಲಕ ಗ್ರಂಥವನ್ನು ಅಪವಿತ್ರಗೊಳಿಸಿದ ಕೆಲಸವನ್ನು ಅವರೇ ಮಾಡಿರುವುದಾಗಿ ಖಚಿತವಾಗಿದೆ ಎಂದು ಹೇಳಿದ್ದಾರೆ.

SCROLL FOR NEXT