ಪಾಟ್ನಾ: ವಿದೇಶಿ ಬ್ಯಾಂಕ್‍ಗಳಲ್ಲಿ ಹಲವರು ಬಚ್ಚಿಟ್ಟಿರುವ ಕಪ್ಪು ಹಣವನ್ನು ದೇಶಕ್ಕೆ ತಂದು ಬಡವರ ಕಲ್ಯಾಣ ಯೋಜನೆಗಳಿಗೆ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಬಳಸಿಕೊಳ್ಳಲಿದೆ. ಆದ್ದರಿಂದ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೂ 15 ಲಕ್ಷ ರೂಪಾಯಿ ವರ್ಗಾಯಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.
ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕಪ್ಪು ಹಣ ವಿದೇಶದಿಂದ ವಾಪಸ್ ತರುವ ವಿಷಯ ಪ್ರಸ್ತಾಪದ ವೇಳೆ, ಹೊರ ದೇಶಗಳ ಬ್ಯಾಂಕ್ ಗಳಲ್ಲಿರುವ ಕಪ್ಪು ಹಣ ಎಷ್ಟಿದೆ ಎಂದರೆ ದೇಶದ ಪ್ರತಿಯೊಬ್ಬರ ̈ಬ್ಯಾಂಕ್ ಖಾತೆಗಳಿಗೂ 15 ಲಕ್ಷ ರೂಪಾಯಿ ಜಮಾ ಮಾಡಬಹುದು ಎಂದು ಹೇಳಿದ್ದು ನಿಜ, ಆದರೆ ಪ್ರತಿಯೊಬ್ಬರ ಖಾತೆಗೂ ಇಷ್ಟು ಮೊತ್ತದ ಹಣವನ್ನು ಜಮೆ ಮಾಡಲಾಗುವುದು ಎಂದು ಇದರ ಅರ್ಥವಲ್ಲ, ಸಾರ್ವಜನಿಕ ಸಭೆಗಳಲ್ಲಿ ಮಾತನಾಡುವಾಗ, ನಾಯಕರು ಕೆಲವೊಮ್ಮೆ ಭಾವೋದ್ವೇಗದಲ್ಲಿ ನೀಡುವ ಹೇಳಿಕೆಗಳನ್ನು ಅಕ್ಷರ ಸಹ ಅರ್ಥೈಸಬಾರದು ಎಂದರು.
ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು, ಸಾಹಿತಿಗಳು ವಾಪಸ್ಸು ಮಾಡುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಅಮಿತ್ ಶಾ, ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ಇತ್ತೀಚೆಗೆ ನಡೆದಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಸಾಹಿತಿಗಳು ಈ ಕ್ರಮ ಕೈಗೊಂಡಿದ್ದಾರೆ. ಈ ರಾಜ್ಯಗಳಲ್ಲಿ ಬಿಜೆಪಿ ಅಲ್ಲ, ಸಮಾವಾದಿ ಪಕ್ಷ ಮತ್ತು ಕಾಂಗ್ರೆಸ್ ಅಧಿಕಾರದಲಿವೆ. ಬಿಜೆಪಿ ಅಥವಾ ಅದರ ಮಿತ್ರ ಪಕ್ಷಗಳು ಇಂತಹ ಪ್ರಕರಣಗಳ ಹಿಂದಿದ್ದಲ್ಲಿ ಗುಜರಾತ್, ಮಧ್ಯಪ್ರದೇಶ್, ರಾಜಸ್ತಾನ್, ಗೋವಾ ರಾಜ್ಯಗಳಲ್ಲಿ ಏಕೆ ಸಾಹಿತಿಗಳ ಪ್ರತಿಭಟನೆ ನಡೆಯುತ್ತಿಲ್ಲ ಎಂದು ಪ್ರಶ್ನಿಸಿದರು.
ಉತ್ತರ ಪ್ರದೇಶ್ ಮತ್ತು ಕರ್ನಾಟಕದಲ್ಲಿ ಮತಬ್ಯಾಂಕ್ ರಾಜಕಾರಣ ಕಾನೂನು ಮತ್ತು ಸುವ್ಯವಸ್ಥೆಯನ್ನು ತನ್ನ ಕೈಗೆ ತೆಗೆದುಕೊಂಡಿದೆ. ನರೇಂದ್ರ ಮೋದಿ ವಿರುದ್ಧ ಲೋಕಸಭಾ ಚುನಾವಣೆ ವೇಳೆ ತಮ್ಮಂತೆಯೇ ಹಲವರು ಸಹಿ ಸಂಗ್ರಹದಲ್ಲಿ ಭಾಗವಹಿಸಿದ್ದಾಗಿ ಈ ಲೇಖಕರು ಹೇಳುತ್ತಿರುವುದರಲ್ಲೂ ಅರ್ಥವಿಲ್ಲ ಎಂದು ಬಿಜೆಪಿ ಅಧ್ಯಕ್ಷರು ಟೀಕಿಸಿದರು.