ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಅಪ್ರಾಪ್ತೆಯರ ಮೇಲಿನ ಅತ್ಯಾಚಾರದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ನೋಬೆಲ್ ಪುರಸ್ಕೃತ ಹಾಗೂ ಮಕ್ಕಳ ಹಕ್ಕು ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಅವರು, ಭಾರತ ಹೆಣ್ಣುಮಕ್ಕಳಿಗೆ ಸುರಕ್ಷಿತ ತಾಣವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
21ನೇ ನ್ಯಾಯಮೂರ್ತಿ ಸುನಂದಾ ಭಾಂದ್ರೆ ಅವರ ಸ್ಮರಣಾರ್ಥ ನವದೆಹಲಿಯಲ್ಲಿ ನಡೆದ 'ಡ್ರೀಮ್ಸ್ ಫಾರ್ ಎ ಚೈಲ್ಡ್ ಫ್ರೆಂಡ್ಲೀ ಇಂಡಿಯಾ' ಕಾರ್ಯಕ್ರಮದಲ್ಲಿ ಮಾತನಾಡಿದ ಕೈಲಾಶ್ ಸತ್ಯಾರ್ಥಿ ಅವರು, ದೇಶದ ರಾಜಧಾನಿಯಲ್ಲೇ ಅಪ್ರಾಪ್ರೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೆಣ್ಣು ಮಕ್ಕಳಿಗೆ ನಮ್ಮ ದೇಶ ಸುರಕ್ಷಿತ ತಾಣವಾಗಿಲ್ಲ. ಇನ್ನು ಜೀವಂತ ದೇವತೆಗಳಿಗೇ ಸುರಕ್ಷಿತವಲ್ಲದ ವಾತಾವರಣ ನಿರ್ಮಾಣವಾಗಿದ್ದು, ದೇವತೆಗಳನ್ನು, ಹೆಣ್ಣುಮಕ್ಕಳನ್ನು ನಾವು ಪೂಜೆ ಮಾಡುತ್ತಿದ್ದೇವೆ ಎಂದು ನೈತಿಕ ವಾದ ಮಾಡುವುದರಲ್ಲಿ ಅರ್ಥವೇನಿದೆ? ಸತ್ಯಾರ್ಥಿ ಪ್ರಶ್ನಿಸಿದ್ದಾರೆ.
"ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ಒಂದು ಅಥವಾ ಎರಡು ದಿನ ಪ್ರತಿಭಟನೆ ಮಾಡಿ ಇಂಡಿಯಾ ಗೇಟ್ ಬಳಿ ಹೋಗಿ ಕ್ಯಾಂಡಲ್ ಹಚ್ಚುವುದರಿಂದ ಯಾವುದೇ ಪ್ರಯೋಜನವಿಲ್ಲ. ಹೆಣ್ಣುಮಕ್ಕಳಿಗೆ ಇದೀಗ ಮನೆಯಲ್ಲಾಗಲೀ, ಶಾಲಾ-ಕಾಲೇಜಿನಲ್ಲಾಗಲಿ, ನೆರೆಹೊರೆಯಲ್ಲಾಗಲಿ ಅಥವಾ ಪೊಲೀಸ್ ಠಾಣೆಯಲ್ಲಾಗಲಿ ಸುರಕ್ಷೆ ಇಲ್ಲ. ಇಂದಿನ ದಿನಗಳಲ್ಲಿ ಹೆಣ್ಣುಮಕ್ಕಳು ಭಯದಿಂದ ಜೀವನ ನಡೆಸುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ನಮ್ಮ ಎಲ್ಲಾ ಪ್ರತಿಕ್ರಿಯೆಗಳಿಗೂ ಭಯವೇ ಕಾರಣವಾಗಿದೆ ಎಂದು ಸತ್ಯಾರ್ಥಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.