ಪಾಟ್ನಾ: ನಾನು ಹೊರಗಿನವನಾದರೆ, ಸೋನಿಯಾ ಗಾಂಧಿ ಯಾರು ಎಂದು ಪ್ರಶ್ನಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿ ಪರವಾಗಿ ಇಂದು ನಾಲ್ಕನೇ ಹಂತದ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ನಿತೀಶ್ ವಿರುದ್ಧ ವಾಗ್ಧಾಳಿ ನಡೆಸಿದ್ದು, ನಾನು ಹೊರಗಿನಿಂದ ಬಂದವನು ಎಂದು ಹೇಳುತ್ತಾರಲ್ಲಾ, ಹಾಗಾದರೇ, ಸೋನಿಯಾ ಗಾಂಧಿ ಎಲ್ಲಿನವರು ಎಂದು ಪ್ರಶ್ನಿಸಿದ್ದಾರೆ.
ಬಿಹಾರ ದೇಶದ ಪ್ರಮುಖ ಅಂಗ. ಇದೇ ಬಿಹಾರದ ಜನತೆ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಿ ನನ್ನನ್ನು ಭಾರತದ ಪ್ರಧಾನಿಯನ್ನಾಗಿ ಮಾಡಿದ್ದಾರೆ. ಹೀಗಿರಬೇಕಾದರೆ ನಾನು ಹೊರಗಿನವನಾಗಲು ಹೇಗೆ ಸಾಧ್ಯ. ನಾನು ಹೊರಗಿನವನು ಎಂದು ನೀತೀಶ್ ಹೇಳುತ್ತಾರಲ್ಲ, ನಾನೇನು ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾದ ಪ್ರಧಾನಿಯೇ ಎಂದು ಪ್ರಶ್ನಿಸಿದ್ದಾರೆ.
ಅಭಿವೃದ್ಧಿ ಕೆಲಸ ಮಾಡದೇ ಇರುವವರು ಇಂತಹ ಆರೋಪಗಳನ್ನು ಮಾಡುತ್ತಾರೆ. ನಮ್ಮ ಪಕ್ಷದ ಮೇಲೆ ಜನರು ಇಟ್ಟಿರುವ ನಂಬಿಕೆಯ ಹಾದಿ ತಪ್ಪಿಸಲು ಈ ರೀತಿ ಹೇಳಿಕೆಗಳನ್ನು ನೀಡುತ್ತಾರೆ ಎಂದು ನಿತೀಶ್ ವಿರುದ್ಧ ಮೋದಿ ಗುಡುಗಿದ್ದಾರೆ.