ಲಂಕಾ ಸೈನಿಕರ ವಶದಲ್ಲಿರುವ ತಮಿಳು ನಿರಾಶ್ರಿತರು (ಸಂಗ್ರಹ ಚಿತ್ರ) 
ದೇಶ

ಶ್ರೀಲಂಕಾ-ಎಲ್ ಟಿಟಿಇ ಕಾಳಗ: ಅಮಾನವೀಯತೆಗೆ ನೇರ ನಿದರ್ಶನ

ಶ್ರೀಲಂಕಾದಲ್ಲಿ ನಡೆದಿದ್ದ ಎಲ್ ಟಿಟಿಇ ಮತ್ತು ಲಂಕಾ ಸೈನಿಕರ ಕಾಳಗದಲ್ಲಿ ಸಾಕಷ್ಟು ಅಮಾನವೀಯ ಕೃತ್ಯಗಳು ಮತ್ತು ಭಯಂಕರ ಯುದ್ಧಾಪರಾಧಗಳು ನಡೆದಿರುವುದಾಗಿ ವಿಶ್ವಸಂಸ್ಥೆಯ ಮಾನವ ಹಕ್ಕು ವಿಭಾಗದ ವರದಿ ಹೇಳಿದೆ...

ವಿಶ್ವಸಂಸ್ಥೆ: ಶ್ರೀಲಂಕಾದಲ್ಲಿ ನಡೆದಿದ್ದ ಎಲ್ ಟಿಟಿಇ ಮತ್ತು ಲಂಕಾ ಸೈನಿಕರ ಕಾಳಗದಲ್ಲಿ ಸಾಕಷ್ಟು ಅಮಾನವೀಯ ಕೃತ್ಯಗಳು ಮತ್ತು ಭಯಂಕರ ಯುದ್ಧಾಪರಾಧಗಳು ನಡೆದಿರುವುದಾಗಿ ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗ ಹೇಳಿದೆ.

ಶ್ರೀಲಂಕಾ ಮತ್ತು ಎಲ್ ಟಿಟಿಇ ಪಡೆಗಳ ನಡುವೆ ದಶಕಗಳ ಕಾಲ ನಡೆದ ಭೀಕರ ಕಾಳಗದಲ್ಲಿ ಲಕ್ಷಾಂತರ ಅಮಾಯಕರು ಸಾವಿಗೀಡಾಗಿದ್ದು, ಕೋಟ್ಯಂತರ ಮಂದಿ ನಿರಾಶ್ರಿತರಾಗಿದ್ದಾರೆ. ಇದೀಗ ಶ್ರೀಲಂಕಾ ಸೇನೆ ಮತ್ತು ಎಲ್ ಟಿಟಿಇ ನಡುವಿನ ಕಾಳಗ ಮುಕ್ತಾಯಗೊಂಡಿದೆಯಾದರೂ, ಕಾಳಗದ ನಡುವೆ ಅಂತಾರಾಷ್ಟ್ರ್ಯೀಯ ಕಾನೂನನ್ನು ಮೀರಿ ಉಭಯಪಡೆಗಳು ಯುದ್ಧಾಪರಾಧದಲ್ಲಿ ತೊಡಗಿದ್ದ ಕುರಿತು ವಿಶ್ವಸಂಸ್ಥೆ ವರದಿ ತಯಾರಿಸಿದೆ.

ಬುಧವಾರ ವಿಶ್ವಸಂಸ್ಥೆ ತನ್ನ ವರದಿಯನ್ನು ಬಿಡುಗಡೆ ಮಾಡಿದ್ದು, ತಮಿಳರ ಮೇಲೆ ಶ್ರೀಲಂಕಾ ಸೇನೆ ನಡೆಸಿದ ದೌರ್ಜನ್ಯದ ಕುರಿತು ಬೆಳಕು ಚೆಲ್ಲಿದೆ. ಅಂತೆಯೇ ದಶಕಗಳ ಕಾಲ ಲಂಕಾದಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಶ್ರೀಲಂಕಾ ಸೇನೆ ವಿರುದ್ಧ ಹೋರಾಟ ಮಾಡಿದ ಎಲ್ ಟಿಟಿಇ ಪಡೆಗಳೂ ಕೂಡ ಯುದ್ಧಾಪರಾಧದದಲ್ಲಿ ತೊಡಗಿದ್ದ ಕುರಿತು ವಿಶ್ವಸಂಸ್ಥೆಯ ವರದಿ ಮಾಹಿತಿ ನೀಡಿದೆ.  ವಿಶ್ವಸಂಸ್ಥೆಯ ವರದಿ ಹೇಳುವಂತೆ ಶ್ರೀಲಂಕಾ ಮತ್ತು ಎಲ್ ಟಿಟಿಇ ಪಡೆಗಳು ನಡುವೆ ನಡೆದ ಕಾಳಗ ಹಲವು ಭೀಕರ ಮತ್ತು ಭೀಬತ್ಸ ಯುದ್ಧಪರಾಧಗಳಿಗೆ ನಿದರ್ಶನವಾಗಿದೆ.  ಕಾನೂನುಬಾಹಿರ ಹತ್ಯೆಗಳು, ಲಿಂಗಾಧಾರಿತ ಹಿಂಸೆ, ಬಲವಂತ ಕಣ್ಮರೆ ಪ್ರಕರಣಗಳಂತಹ ಕ್ರೂರ ಘಟನೆಗಳು ಜರುಗಿವೆ ಎಂದು ವರದಿಯಲ್ಲಿ ತಿಳಿಸಿದೆ. ಯುದ್ಧಪರಾಧಗಳ ಕುರಿತು ವಿಶ್ವಸಂಸ್ಥೆ ಪಟ್ಟಿಯನ್ನೇ ತಯಾರು ಮಾಡಿದೆ.

ಕಾನೂನು ಬಾಹಿರ ಹತ್ಯೆಗಳು
ಲಂಕಾಪಡೆಗಳು ಮತ್ತು ಎಲ್ ಟಿಟಿಇ ನಡುವೆ ನಡೆದ ಕಾಳಗದಲ್ಲಿ ಉಭಯ ಪಡೆಗಳಿಂದ ಲೆಕ್ಕವಿಲ್ಲದಷ್ಟು ಕಾನೂನು ಬಾಹಿರ ಹತ್ಯೆಗಳು ನಡೆದಿವೆ. ಇದರಲ್ಲಿ ಲಂಕಾ ಸೇನೆಯ ಪ್ರಮಾಣ ಹೆಚ್ಚಿದ್ದು, ತಮಿಳು ರಾಜಕಾರಣಿಗಳು, ಮಾನವಹಕ್ಕು ಹೋರಾಟಗಾರರು ಮತ್ತು ಕಾರ್ಯಕರ್ತರು, ಪತ್ರಕರ್ತರು, ಸಾಮಾನ್ಯ ಪ್ರಜೆಗಳನ್ನು ಕೂಡ ಲಂಕಾ ಪಡೆಗಳು ಚಿತ್ರಹಿಂಸೆ ನೀಡಿ ಕೊಂದು ಹಾಕಿವೆ. ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ ಟಿಟಿಇಯ ಮೇಲೆ ಕೆಟ್ಟ ಭಾವನೆ ಮೂಡಿಸಬೇಕೆಂಬ ಉದ್ದೇಶದಿಂದ ತಮ್ಮದೇ ಪಡೆಗಳ ಸೈನಿಕರನ್ನು ಹೀನಾಯವಾಗಿ ಕೊಂದ ಕುರಿತು ವಿಶ್ವಸಂಸ್ಥೆಯ ವರದಿಯಲ್ಲಿ ಅಂಶಗಳು ದಾಖಲಾಗಿವೆ. ಲಂಕಾ ಸೈನಿಕರ ವಶದಲ್ಲಿದ್ದ ಜನರನ್ನು ಮತ್ತು ಕಾರ್ಯಾಚರಣೆ ವೇಳೆ ಬಂಧಿಸಿದ ಎಲ್ ಟಿಟಿಇ ಕಾರ್ಯಕರ್ತರನ್ನು ಕ್ರೂರವಾಗಿ ಕೊಲ್ಲಲಾಗಿದೆ ಎಂದು ತಿಳಿದುಬಂದಿದೆ.

ಇನ್ನು ಲಂಕಾ ಸೇನೆಯಂತೆಯೇ ಎಲ್ ಟಿಟಿಇ ಕೂಡ ಸಾವಿರಾರು ಅಮಾಯಕರ ನರಮೇಧವನ್ನೇ ನಡೆಸಿದ್ದು, ತಮ್ಮವರೇ ಆದ ತಮಿಳಿಗರನ್ನು, ಮುಸ್ಲಿಮರನ್ನು ಮತ್ತು ಸಿಂಹಳೀಯರನ್ನು ಕ್ರೂರವಾಗಿ ಚಿತ್ರಹಿಂಸೆ ನೀಡಿ ಕೊಂದು ಹಾಕಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆತ್ಮಹತ್ಯಾ ಬಾಂಬ್ ದಾಳಿ, ಲ್ಯಾಂಡ್ ಮೈನ್ ದಾಳಿ, ಹತ್ಯೆ, ಲಂಕಾ ಸರ್ಕಾರಿ ಅಧಿಕಾರಿಗಳ ಸಾರ್ವಜನಿಕ ಹತ್ಯೆಗಳಂತಹ ಕೃತ್ಯಗಳಲ್ಲಿ ಎಲ್ ಟಿಟಿಇ ಭಾಗಿಯಾಗಿತ್ತು ಎಂದು ಹೇಳಲಾಗಿದೆ.

ಲಿಂಗಾಧಾರಿತ ಹಿಂಸೆ

ಇನ್ನು ಯುದ್ಧಪರಾಧ ಕುರಿತು ತನಿಖೆಗಾಗಿ ಹೊರಟಿದ್ದ ವಿಶ್ವಸಂಸ್ಥೆಯ ತಂಡಕ್ಕೆ ಬೆಚ್ಚಿಬೀಳಿಸುವಂತಹ ಮಾಹಿತಿಗಳು ದೊರೆತಿದ್ದು, ಉಭಯ ಪಡೆಗಳಿಂದ ಲಿಂಗಾಧಾರಿತ ಹಿಂಸೆ ಕೂಡ ನಡೆದಿತ್ತು ಎಂದು ತಿಳಿದುಬಂದಿದೆ. ಉಭಯ ಪಡೆಗಳು ವಿರೋಧಿ ಪಡೆಯ ಮಹಿಳಾ ಪಡೆಗಳನ್ನು ಮತ್ತು ಸಾಮಾನ್ಯ ಮಹಿಳೆಯರನ್ನು ತೀರ ನೀಚವಾಗಿ ನಡೆಸಿಕೊಂಡಿದ್ದು, ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಉಭಯ ಪಡೆಗಳಲ್ಲೂ ಸಾಮಾನ್ಯವಾಗಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕಣ್ಮರೆಯಾದ ಸೈನಿಕರು

ಇನ್ನು ಕಾಳಗದ ಕೊನೆಹಂತದಲ್ಲಿ ಲಂಕಾ ಸೈನಿಕ ಪಡೆಗಳಿಗೆ ಶರಣಾದ ಎಲ್ ಟಿಟಿಇಯ ಕೊನೆಯ ಹಂತದ ಬಂಡುಕೋರರು ದಿಢೀರ್ ನಾಪತ್ತೆಯಾದ ವಿಚಾರವನ್ನೂ ಕೂಡ ವಿಶ್ವಸಂಸ್ಥೆಯ ತನಿಖಾ ತಂಡ ಪತ್ತೆಹಚ್ಚಿದೆ. ಯುದ್ಧದ ಅಂತಿಮ ಹಂತದಲ್ಲಿ ತಾವಾಗಿಯೇ ಶರಣಾದ ಎಲ್ ಟಿಟಿಇ ಯೋಧರನ್ನು ಬಿಳಿ ವ್ಯಾನ್ ನಲ್ಲಿ ಅಪಹರಿಸಲಾಗಿತ್ತಂತೆ. ಬಳಿಕ ಅವರು ಏನಾದರು ಎಂಬ ವಿಚಾರ ಎಲ್ಲಿಯೂ ಬಹಿರಂಗವಾಗಿಯೇ ಇಲ್ಲ ಎಂದು ವರದಿಯಲ್ಲಿ ತಿಳಿದುಬಂದಿದೆ.

ಚಿತ್ರಹಿಂಸಾ ಕೊಠಡಿ
ಯುಧ್ದಗ್ರಸ್ಥ ಭೂಮಿಯಲ್ಲಿ ಲಂಕಾ ಪಡೆಗಳು ತಮ್ಮದೇ ಚಿತ್ರಹಿಂಸಾ ಕೊಠಡಿಗಳನ್ನು ತೆರೆದು ಅಲ್ಲಿ ಸೆರೆಸಿಕ್ಕ ಎಲ್ ಟಿಟಿಇ ಯೋಧರನ್ನು ಮತ್ತು ತಮಿಳುವಾಸಿಗಳನ್ನು ಬಂಧಿಸಿ ಚಿತ್ರಹಿಂಸೆ ನೀಡಿ ಮಾಹಿತಿ ಕಲೆಹಾಕುತ್ತಿದ್ದವು. ಚಿತ್ರಹಿಂಸೆಗಾಗಿಯೇ ಕೆಲ ವಿಶೇಷ ಉಪಕರಣಗಳನ್ನು ತಯಾರು ಮಾಡಿಕೊಂಡು ಈ ವಿಶೇಷ ಕೊಠಡಿಗಳಲ್ಲಿ ಇರಿಸಲಾಗಿತ್ತು. ಕಬ್ಬಿಣದ ರಾಡ್ ಗಳು, ದೊಣ್ಣೆಗಳು, ನೀರಿನ ಬಾಟಲಿಗಳು, ಲಾಳ ಹಾಕಿ ಎತ್ತುವ ರಾಟೆಗಳು ಇಲ್ಲಿ ಸಾಮಾನ್ಯವಾಗಿದ್ದವು.

ಬಲವಂತ ನೇಮಕಾತಿ

ಕಾಳಗದ ಕೊನೆಯ ಹಂತದಲ್ಲಿ ತನ್ನ ಶಕ್ತಿ ಕಳೆದುಕೊಂಡ ಎಲ್ ಟಿಟಿಇ ಸ್ಥಳೀಯ ನಿವಾಸಿಗಳನ್ನು ಬಲವಂತವಾಗಿ ಲಂಕಾ ಪಡೆಗಳ ವಿರುದ್ಧ ಯುದ್ಧಮಾಡುವಂತೆ ಬೆದರಿಕೆ ಹಾಕಿತ್ತು ಎನ್ನುವ ಅಂಶ ಕೂಡ ಬೆಳಕಿಗೆ ಬಂದಿದೆ. ಇದರಲ್ಲಿ ಅಪ್ರಾಪ್ತ ಮಕ್ಕಳು ಕೂಡ ಸೇರಿದ್ದ ಅಂಶವನ್ನು ವಿಶ್ವಸಂಸ್ಥೆ ಬಯಲಿಗೆಳೆದಿದೆ. ಕೇವಲ ಎಲ್ ಟಿಟಿಇ ಮಾತ್ರವಲ್ಲದೆ ಲಂಕಾ ಪಡೆಗಳು ಕೂಡ ಸ್ಥಳೀಯ ಅಪ್ರಾಪ್ತ ಮಕ್ಕಳನ್ನು ಸೇನೆಗೆ ಸೇರಿಸಿಕೊಂಡು ಯುದ್ಧ ಮಾಡಿದ್ದವು ಎಂದು ಹೇಳಿದೆ.

ಒಟ್ಟಾರೆ ದಶಕಗಳ ಕಾಲ ನಡೆದ ಲಂಕಾಸೇನೆ ಮತ್ತು ಎಲ್ ಟಿಟಿಇ ನಡುವಿನ ಯುದ್ಧ ಹಲವು ಯುದ್ಧಪರಾಧಗಳಿಗೆ ಕಾರಣವಾಗಿದ್ದು, ಉಭಯ ಸೇನೆಯ ಕ್ರೂರತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

SCROLL FOR NEXT