ದೇಶ

ರೈತರ ಆತ್ಮಹತ್ಯೆ: ಪರಿಹಾರ ಧನವನ್ನು ರು. 6 ಲಕ್ಷಕ್ಕೇರಿಸಿದ ತೆಲಂಗಾಣ ಸರ್ಕಾರ

Rashmi Kasaragodu
ಹೈದ್ರಾಬಾದ್:  ತೆಲಂಗಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸರ್ಕಾರ ರು. 6 ಲಕ್ಷ ಪರಿಹಾರ ಧನ ನೀಡಲು ತೀರ್ಮಾನಿಸಿದೆ. ಈ ಹಿಂದೆ ಪರಿಹಾರ ಧನ ರು. 1.5 ಲಕ್ಷ ಆಗಿತ್ತು. ಬೆಳೆ ನಾಶ ಹಾಗೂ ರೈತರ ಆತ್ಮಹತ್ಯೆ ಹೆಚ್ಚುತ್ತಿರುವುದರಿಂದ ಪರಿಹಾರ ಮೊತ್ತವನ್ನು ರು. 6 ಲಕ್ಷಕ್ಕೇರಿಸಲು ತೆಲಂಗಾಣ ಸರ್ಕಾರ ಸಚಿವ ಸಂಪುಟ ತೀರ್ಮಾನಿಸಿದೆ.
ಈ ಬಗ್ಗೆ ಸರ್ಕಾರದ ತೀರ್ಮಾನವನ್ನು ಪ್ರಕಟಿಸಿದ ಡೆಪ್ಯುಟಿ ಮುಖ್ಯಮಂತ್ರಿ ಕದಿಯಾಮ್ ಶ್ರೀಹರಿ, ಸೆಪ್ಟೆಂಬರ್ 19ರಿಂದ ಈ ತೀರ್ಮಾನ ಜಾರಿಗೆ ಬಂದಿರುವುದಾಗಿ ಹೇಳಿದ್ದಾರೆ. ಆದಾಗ್ಯೂ,  ಸೆಪ್ಟೆಂಬರ್ 19ಕ್ಕಿಂತ ಮುನ್ನ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ರು. 1.5 ಲಕ್ಷ ಮಾತ್ರ ನೀಡುವುದರ ಬಗ್ಗೆ ಈಗ ವಿವಾದ ಸೃಷ್ಟಿಯಾಗಿದೆ.
ಏತನ್ಮಧ್ಯೆ, ರೈತರು ಆತ್ಮಹತ್ಯೆ ಮಾಡುವುದನ್ನು ನಿಲ್ಲಿಸಲು ಕ್ರಮ ತೆಗೆದುಕೊಳ್ಳುವ ಬದಲು ಆತ್ಮಹತ್ಯೆ ಮಾಡಿಕೊಂಡವರಿಗೆ ಪರಿಹಾರ ಧನ ಏರಿಕೆ ಮಾಡಿರುವ ಸರ್ಕಾರದ ತೀರ್ಮಾನ ಸರಿಯಲ್ಲ ಎಂದು ವಿಮರ್ಶಕರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ರೈತರು ನಿರೀಕ್ಷೆಯನ್ನು ಕಳೆದುಕೊಳ್ಳಬಾರದು. ಧೈರ್ಯವಾಗಿ ಪರಿಸ್ಥಿತಿಯನ್ನು ಎದುರಿಸಬೇಕು. ಸರ್ಕಾರ ನಿಮ್ಮೊಂದಿಗೆ ಇದೆ ಎಂದು ಡೆಪ್ಯೂಟಿ ಮುಖ್ಯಮಂತ್ರಿ, ಕೃಷಿ ಸಚಿವ ಹಾಗೂ ಗೃಹ ಸಚಿವರು  ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ತೆಲಂಗಾಣ ಸರ್ಕಾರದ ಪ್ರಕಾರ ಕಳೆದ ಒಂದು ವರ್ಷದಲ್ಲಿ 430 ರೈತರು ಆತ್ಮಹತ್ಯೆ ಮಾಡಿದ್ದು, ಅದರಲ್ಲಿ 141 ರೈತರು ಪರಿಹಾರ ಧನ ಪಡೆಯಲು ಅರ್ಹತೆ ಹೊಂದಿದ್ದವರಾಗಿದ್ದಾರೆ.  ಆದರೆ ರಾಜ್ಯದಲ್ಲಿ ಕನಿಷ್ಠ 1200 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿಪಕ್ಷಗಳು ವಾದಿಸುತ್ತಿವೆ.
SCROLL FOR NEXT