ಪಣಜಿ: ಗೋವಾ ಆರ್ ಎಸ್ ಎಸ್ ಮುಖಂಡ ಸುಭಾಷ್ ವೆಲಿಂಗ್ಕರ್, ಬಿಜೆಪಿ ಸರ್ಕಾರ ಹಾಗೂ ಗೋವಾ ಮಾಜಿ ಸಿಎಂ, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗೋವಾ ಜನತೆ ಬೆನ್ನಿಗೆ ಚೂರಿ ಹಾಕಿರುವ ಮನೋಹರ್ ಪರಿಕ್ಕರ್, ಬಾಯಲ್ಲಿ ರಾಮನಾಮ ಬಗಲಲ್ಲಿ ಚೂರಿ(ಅಪ್ರಾಮಾಣಿಕ ವ್ಯಕ್ತಿಯಂತೆ) ಎಂಬಂತೆ ನಡೆದುಕೊಂಡಿದ್ದಾರೆ ಎಂದು ವೆಲಿಂಗ್ಕರ್ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಚರ್ಚ್ ಗಳಿಂದ ನಡೆಸಲಾಗುತ್ತಿರುವ ಆಂಗ್ಲ ಶಾಲೆಗಳಿಗೆ ಅನುದಾನ ನಿಡುವ ವಿಷಯದಲ್ಲಿ ಆರ್ ಎಸ್ ಎಸ್ ಹಾಗೂ ಬಿಜೆಪಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿರುವ ಹಿನ್ನೆಲೆಯಲ್ಲಿ ಈ ಆರೋಪ ಕೇಳಿಬಂದಿದೆ.
ಮನೋಹರ್ ಪರಿಕ್ಕರ್ ವಿರುದ್ಧ ವಾಗ್ದಾಳಿ ನಡೆಸಿರುವ ಸುಭಾಷ್ ವೆಲಿಂಗ್ಕರ್, 2011 ರಲ್ಲಿ ಮನೋಹರ್ ಪರಿಕ್ಕರ್ ವಿಪಕ್ಷ ನಾಯಕರಾಗಿದ್ದಾಗ ಚರ್ಚ್ ಗಳಿಂದ ನಡೆಸಲ್ಪಡುತ್ತಿದ್ದ ಆಂಗ್ಲ ಮಾಧ್ಯಮಗಳಿಗೆ ಅನುದಾನ ನೀಡುವುದನ್ನು ವಿರೋಧಿಸಿ ಮಾಡಿದ್ದ ಭಾಷಣವನ್ನು ಉಲ್ಲೇಖಿಸಿದ್ದು, ಮನೋಹರ್ ಪರಿಕ್ಕರ್ ವಿಪಕ್ಷ ನಾಯಕರಾಗಿದ್ದಾಗ ಮಾಡಿದ್ದ ಭಾಷಣದಲ್ಲಿ ಅನುದಾನ ನೀಡುವುದನ್ನು ವಿರೋಧಿಸಿದ್ದರು. ಆದರೆ ಅಧಿಕಾರಕ್ಕೆ ಬಂದ ನಂತರ ಅವರೂ ಹಿಂದಿನ ಸರ್ಕಾರದಂತೆಯೇ ನಡೆದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮನೋಹರ್ ಪರಿಕ್ಕರ್ ಅವರದ್ದೇ ಭಾಷಣದ ವಿರುದ್ಧ ನಡೆದುಕೊಂಡಿದ್ದಾರೆ, ಹಿಂದಿನ ಸರ್ಕಾರಗಳು ನೀಡುತ್ತಿದ್ದ ಅನುದಾನವನ್ನು ಅವರೂ ಮುಂದುವರೆಸಿದ್ದಾರೆ. ಈ ಮೂಲಕ ಬಿಜೆಪಿ ಗೋವಾ ಸಂಸ್ಕೃತಿ ನಾಶ ಮಾಡಲು ಹಿಂದಿನ ಸರ್ಕಾರಗಳಂತೆಯೇ ಯತ್ನಿಸುತ್ತಿದ್ದು ಬಿಜೆಪಿ, ಮನೋಹರ್ ಪರಿಕ್ಕರ್ ಗೋವಾ ಜನತೆಗೆ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ವೆಲಿಂಗ್ಕರ್ ಆರೋಪಿಸಿದ್ದಾರೆ.