ಕಿರುಕುಳಕ್ಕೆ ಒಳಗಾದ ಬಾಲಕಿಯ ತಾಯಿ
ಕುಪ್ವಾರ: ಜಮ್ಮು ಮತ್ತು ಕಾಶ್ಮೀರದ ಹಂದ್ವಾರದ ವಿದ್ಯಾರ್ಥಿನಿಗೆ ಯೋಧ ಲೈಂಗಿಕ ಕಿರುಕುಳ ನೀಡಿದ ಆರೋಪ ಕಣಿವೆ ರಾಜ್ಯದಲ್ಲಿ ಹಿಂಸಾತ್ಮಕ ಪ್ರತಿಭಟನೆ ಕಾರಣವಾಗಿದ್ದು, ಐವರ ಸಾವಿನ ನಂತರ ‘ಸೇನಾ ಯೋಧನನ್ನು ಕಂಡು ಬಾಲಕಿ ಕಿರುಚಿದ್ದಳು’ ಎಂದು ಆಕೆಯ ತಾಯಿ ಶನಿವಾರ ಹೇಳಿಕೆ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿ ಹಾಗೂ ಆಕೆಯ ತಂದೆಯನ್ನು ಪೊಲೀಸರು ಬಂಧಿಸಿದ್ದು, ಅವರನ್ನು ಭೇಟಿ ಮಾಡಲು ಪೊಲೀಸರು ತಮಗೆ ಅವಕಾಶ ನೀಡುತ್ತಿಲ್ಲ ಎಂದು ತಾಯಿ ಆರೋಪಿಸಿದ್ದಾಳೆ. ಅಲ್ಲದೆ ತನಗೆ ಲೈಂಗಿಕ ಕಿರುಕುಳ ನೀಡಿದ್ದು ಯೋಧ ಅಲ್ಲ, ಸ್ಥಳೀಯ ಯುವಕ ಎಂಬ ಹೇಳಿಕೆಯನ್ನು ತನ್ನ ಮಗಳು ಪೊಲೀಸರಿಗೆ ನೀಡಿದ್ದು ತೀವ್ರ ಒತ್ತಡದ ಮಧ್ಯೆ ಎಂದು ತಿಳಿಸಿದ್ದಾರೆ.
ಮಾಧ್ಯಮವೊಂದಕ್ಕೆ ಘಟನಾವಳಿಗಳನ್ನು ವಿವರಿಸಿದ ಬಾಲಕಿಯ ತಾಯಿ, ‘ಶಾಲೆ ಮುಗಿದ ಬಳಿಕ ಆಕೆ ಉಳಿದ ವಿದ್ಯಾರ್ಥಿನಿಯರ ಜೊತೆಗೆ ಹೊರಕ್ಕೆ ಬಂದಳು ಮತ್ತು ಮಾರುಕಟ್ಟೆಯಲ್ಲಿನ ವಾಶ್ರೂಂಗೆ ಹೋದಳು. ಒಳಕ್ಕೆ ಹೋದಾಗ ಸೇನಾ ಯೋಧನೊಬ್ಬನನ್ನು ಕಂಡು ಆಕೆ ಕಿರುಚಾಡಿದಳು. ಅಲ್ಲಿ ಇದ್ದಂತಹ ಹುಡುಗರು ತಮ್ಮ ಸಹೋದರಿ ಕಿರುಚಾಡುತ್ತಿದ್ದುದನ್ನು ಸಹಿಸಲಿಲ್ಲ. ಜನ ಸೇರಿದರು. ಆಗ ಪೊಲೀಸರು ಗುಂಡು ಹಾರಿಸಿದರು’ ಎಂದು ಬಾಲಕಿಯ ತಾಯಿ ಹೇಳಿದ್ದಾಳೆ.
ಯೋಧನೊಬ್ಬ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಸ್ಥಳೀಯರು ಕಳೆದ ಹಂದ್ವಾರದಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೇ ಸೇನೆಯು ಬಾಲಕಿಯು ಪೊಲೀಸರಿಗೆ ನೀಡಿದ ಹೇಳಿಕೆಯ ವಿಡಿಯೋ ವನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ವಿದ್ಯಾರ್ಥಿನಿ ತನಗೆ ಲೈಂಗಿಕ ಕಿರುಕುಳ ನೀಡಿದ್ದು ಯೋಧ ಅಲ್ಲ, ಬದಲಾಗಿ ಸ್ಥಳೀಯ ಯುವಕನೊಬ್ಬನ ದುರ್ವರ್ತನೆ ತೋರಿದ್ದಾನೆ ಎಂದು ಹೇಳಿದ್ದಳು.
ಘಟನೆಗೆ ಸಂಬಂಧಿಸಿದಂತೆ 4 ದಿನಗಳ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಒಟ್ಟು ಐವರು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಕೇಂದ್ರ ಸರ್ಕಾರವು ಈದಿನ ಹೆಚ್ಚುವರಿ ಸೇನಾಪಡೆಗಳನ್ನು ಹಿಂಸಾಚಾರ ನಿಯಂತ್ರಣಕ್ಕೆ ಕಳುಹಿಸಿಕೊಡುವುದಾಗಿ ಪ್ರಕಟಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics