ಆಗ್ರಾ: ಇಂಗ್ಲೆಂಡಿನ ರಾಜಕುಮಾರ ದಂಪತಿ ವಿಲಿಯಮ್ ಮತ್ತು ಕೇಟ್ ಮಿಡ್ಲ್ ಟನ್ ಸ್ವಾಗತಕ್ಕೆ ವಿಶ್ವವಿಖ್ಯಾತ ತಾಜ್ ಮಹಲ್ ಸಜ್ಜಾಗಿದೆ.
ಆಗ್ರಾದ ಈ ಐತಿಹಾಸಿಕ ಪ್ರೀತಿಯ ಸಂಕೇತದ ಸ್ಮಾರಕಕ್ಕೆ ಬ್ರಿಟನ್ ನ ರಾಜದಂಪತಿ ಇಂದು ಅಪರಾಹ್ನ 3.45ರ ಸುಮಾರಿಗೆ ಆಗಮಿಸಲಿದ್ದು, ಅಲ್ಲಿ ಭೋಜನ ಸವಿದ ಬಳಿಕ ದೆಹಲಿಗೆ ತೆರಳಲಿದ್ದಾರೆ. ಇವರ ಆಗಮನದ ಸಂದರ್ಭದಲ್ಲಿ ತಾಜ್ ಮಹಲ್ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿರುತ್ತದೆ.
ಪ್ರೊಟೊಕಾಲ್ ಅಡಿ ವಿನಾಯ್ತಿಯಿರುವುದರಿಂದ ರಾಜದಂಪತಿ ಮತ್ತವರ ಮುತ್ತಣದವರಿಗೆ ಪ್ರವೇಶ ಟಿಕೆಟ್ ತೆಗೆದುಕೊಳ್ಳುವ ಅವಶ್ಯಕತೆಯಿರುವುದಿಲ್ಲ ಮತ್ತು ಪ್ರವೇಶದ್ವಾರದಲ್ಲಿ ಯಾವುದೇ ತಪಾಸಣೆಯೂ ಇರುವುದಿಲ್ಲ ಎಂದು ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ತಾಜ್ ಮಹಲ್ ಒಳಗೆ ಪ್ರವೇಶಿಸಲು ಅವರಿಗೆ ಪ್ರತ್ಯೇಕ ಹಾದಿಯಿದೆ. ಅಲ್ಲಿ ರಾಜದಂಪತಿ ಸುಮಾರು 2 ಗಂಟೆಗಳ ಕಾಲ ಕಳೆಯಲಿದ್ದಾರೆ.
ರಾಜದಂಪತಿ ಭೇಟಿ ಸಂದರ್ಭದಲ್ಲಿ ಎಲ್ಲಾ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಾಮಾನ್ಯವಾಗಿ ಶುಕ್ರವಾರಗಳಂದು ತಾಜ್ ಸ್ಮಾರಕ ಮುಚ್ಚಿರುತ್ತದೆ. ಆದರೆ ಈ ಬಾರಿ ಅಜ್ಮರ್ ನಿಂದ ಹಿಂತಿರುಗಿದ ಭಕ್ತರ ಗುಂಪು ಹೆಚ್ಚಾಗಿದ್ದರಿಂದ ನಿನ್ನೆ ತೆರೆದಿತ್ತು ಎಂದು ಜಿಲ್ಲಾಧಿಕಾರಿ ಪಂಕಜ್ ಕುಮಾರ್ ತಿಳಿಸಿದ್ದಾರೆ.
ರಾಜದಂಪತಿ ಭೇಟಿ ಸಂದರ್ಭದಲ್ಲಿ ಜನರ ನೂಕುನುಗ್ಗಲು ಉಂಟಾಗುವ ಸಾಧ್ಯತೆಯಿರುವುದರಿಂದ ರಾಜ್ಯ ಪೊಲೀಸರ ನೆರವು ಕೋರಲಾಗಿದೆ ಎಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಕಮಾಂಡರ್ ಸುಧೀರ್ ಕುಮಾರ್ ತಿಳಿಸಿದ್ದಾರೆ.
ಏಪ್ರಿಲ್ 10ರಿಂದ ವಾರಗಳ ಕಾಲ ಭಾರತ ಪ್ರವಾಸದಲ್ಲಿಜದ್ದ ಬ್ರಿಟನ್ ರಾಜದಂಪತಿ ಮುಂಬೈ, ದೆಹಲಿ, ಅಸ್ಸಾಂನ ಕಜ್ಹಿರಂಗ ರಾಷ್ಟ್ರೀಯ ಉದ್ಯಾನವನ ನಂತರ ಭೂತಾನ್ ಗೆ ತೆರಳಿದ್ದರು. ವಾಪಾಸು ದೆಹಲಿಗೆ ಆಗಮಿಸಿ ನಂತರ ತಮ್ಮ ದೇಶಕ್ಕೆ ಹಿಂತಿರುಗಲಿದ್ದಾರೆ. ಈ ಮಧ್ಯೆ ತಾಜ್ ಮಹಲ್ ಗೆ ಭೇಟಿ ನೀಡುತ್ತಿದ್ದಾರೆ.
ಸ್ವಾತಂತ್ರ್ಯೋತ್ತರ ನಂತರ ರಾಣಿ ಎಲಿಜಬೆತ್ 2, ಪ್ರಿನ್ಸ್ ಫಿಲಿಪ್ 1961ರಲ್ಲಿ ತಾಜ್ ಮಹಲ್ ಗೆ ಭೇಟಿ ಕೊಟ್ಟಿದ್ದರು. ಪ್ರಿನ್ಸ್ ವಿಲಿಯಮ್ಸ್ ಪೋಷಕರಾದ ಪ್ರಿನ್ಸ್ ಚಾರ್ಲ್ಸ್ 1982ರಲ್ಲಿ ಮತ್ತು ಡಯಾನಾ 1992ರಲ್ಲಿ ಆಗ್ರಾಕ್ಕೆ ಭೇಟಿ ನೀಡಿದ್ದರು. ಇವರಲ್ಲಿ ರಾಣಿ ಡಯಾನಾ ಭೇಟಿ ಸ್ಮರಣೀಯವಾದದ್ದು. ತಾಜ್ ಮಹಲ್ ಮುಂದೆ ಮಾರ್ಬಲ್ ಬೆಂಚು ಮೇಲೆ ಕುಳಿತುಕೊಂಡು ರಾಣಿ ಡಯಾನಾ ಛಾಯಾಚಿತ್ರ ತೆಗೆಸಿಕೊಂಡದ್ದು ಅಲ್ಲಿನ ನೆನಪುಗಳಲ್ಲೊಂದು. ಈಗಲೂ ಅದನ್ನು ಡಯಾನಾ ಸೀಟು ಅಂತ ಕರೆಯುತ್ತಾರೆ.