ನವದೆಹಲಿ: ಉತ್ತರಾಖಂಡ್ ಹೈಕೋರ್ಟ್ ಗುರುವಾರ ರಾಜ್ಯದಲ್ಲಿ ಜಾರಿಯಾಗಿದ್ದ ರಾಷ್ಟ್ರಪತಿ ಆಡಳಿತವನ್ನು ವಜಾಗೊಳಿಸಿ ಐತಿಹಾಸಿಕ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತನ್ನ ರಾಷ್ಟ್ರಪತಿ ಆಡಳಿತ ನಿರ್ಧಾರವನ್ನು ಶುಕ್ರವಾರ ಸಮರ್ಥಿಸಿಕೊಂಡಿದೆ.
ಈ ಕುರಿತಂತೆ ಮಾತನಾಡಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು, ಉತ್ತರಾಖಂಡ್ ನಲ್ಲಿ ರಾಜಕೀಯ ವ್ಯವಸ್ಥೆ ಒಡೆದಿದ್ದ ಕಾರಣ ರಾಷ್ಟ್ರಪತಿ ಆಡಳಿತವನ್ನು ತಾತ್ಕಾಲಿಕವಾಗಿ ಜಾರಿಗೆ ತರಲಾಗಿತ್ತು. ಪ್ರಸ್ತುತ ವಿಚಾರ ಸುಪ್ರೀಂ ಅಂಗಳದಲ್ಲಿದ್ದು, ಅಂತಿಮ ತೀರ್ಪು ಬರುವವರೆಗೆ ಕಾಯಬೇಕಿದೆ ಎಂದು ಹೇಳಿದ್ದಾರೆ.
ಉತ್ತರಾಖಂಡ್ ವಿಚಾರವನ್ನು ಉನ್ನತ ನ್ಯಾಯಾಲಯ ಪರಿಶೀಲನೆ ನಡೆಸುತ್ತಿದೆ. ಕಾನೂನು, ನಿಯಮ ಹಾಗೂ ಸಂವಿಧಾನಕ್ಕೆ ಗೌರವ ನೀಡಬೇಕು. ತೀರ್ಪು ಬರುವವರೆಗೆ ಕಾಯಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ತಮ್ಮ ಸರ್ಕಾರ ಕೈಗೊಂಡಿದ್ದ ರಾಷ್ಟ್ರಪತಿ ಆಡಳಿತ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಅವರು, ಉತ್ತರಾಖಂಡ್ ನಲ್ಲಿ ಸಂವಿಧಾನ ಒಡೆದು ಹೋಗಿರುವ ಕುರಿತಂತೆ ಭಾರತ ಸರ್ಕಾರಕ್ಕೆ ತಿಳಿದಿದೆ. ಈಗಲೂ ಸ್ವಾಧೀನತಾ ಮಸೂದೆ ಜಾರಿಯಾಗಿಲ್ಲ.
ಕೇವಲ ಒಂದು ಸರ್ಕಾರ ಮಾತ್ರ ಮಾತಿನ ಮೂಲಕ ಸ್ವಾಧೀನತಾ ಮಸೂದೆ ಜಾರಿಯಾಗಿದೆ ಎಂದು ಹೇಳುತ್ತಿದೆ. ಮತ್ತೊಬ್ಬರು ಇದನ್ನು ತಿರಸ್ಕರಿಸುತ್ತಿದ್ದಾರೆ. ಎರಡು ರೀತಿಯ ಅಭಿಪ್ರಾಯಗಳು ಜೊತೆಗೆ ಹೋಗಲು ಹೇಗೆ ಸಾಧ್ಯ? ಹೀಗಾಗಿ ಈ ಕುರಿತು ಸಾಕಷ್ಟು ಗೊಂದಲಗಳಿವೆ. ಈ ಗೊಂದಲಗಳಿಗೆ ತೆರೆ ಬಿದ್ದರೆ ಮಾತ್ರ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ ಎಂದು ಹೇಳಿದ್ದಾರೆ.