ಆಗಸ್ಟಾ ಹೆಲಿಕಾಪ್ಟರ್ (ಸಂಗ್ರಹ ಚಿತ್ರ)
ನವದೆಹಲಿ: ಸುಮಾರು 3600 ಕೋಟಿ ರುಪಾಯಿಗಳ ವಿವಿಐಪಿ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಭಾರತೀಯ ವಾಯುಪಡೆ(ಐಎಎಫ್) ಮಾಜಿ ಮುಖ್ಯಸ್ಥ ಎಸ್ಪಿ ತ್ಯಾಗಿ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ವರದಿಗಳ ಪ್ರಕಾರ, ಶೀಘ್ರದಲ್ಲೇ ಜಾರಿ ನಿರ್ದೇಶನಾಲಯ(ಇಡಿ) ಎಸ್ ಪಿ ತ್ಯಾಗಿ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಗಳ ಹೊರ ಬೀಳುತ್ತಿದ್ದು, ಸಂಸತ್ತಿನಲ್ಲಿ ಆಡಳತರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ.
ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಈ ಹಿಂದೆ 2013ರಲ್ಲಿ ಎಸ್.ಪಿ.ತ್ಯಾಗಿ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಮಧ್ಯವರ್ತಿ ಗೈಡೋ ರಲ್ಫ್ ಹಸ್ಕೆ ಅವರನ್ನು ಭೇಟಿ ಮಾಡಿರವುದಾಗಿ ಒಪ್ಪಿಕೊಂಡಿದ್ದರು.
ಇನ್ನು ಜಾರಿ ನಿರ್ದೇಶನಾಲಯವು ಎರಡು ವರ್ಷಗಳ ಹಿಂದೆ ತ್ಯಾಗಿ ವಿರುದ್ಧ ಹಣ ವರ್ಗಾವಣೆ ಕಾಯ್ದೆಯ ಅಡಿಯಲ್ಲಿ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ಅಲ್ಲದೆ ತ್ಯಾಗಿ ಅವರ ಸಹೋದರ ಸಂಬಂಧಿಗಳಿಗೆ ಸೇರಿದೆ ಎಂದು ಹೇಳಲಾಗುತ್ತಿರುವ ರಾಜಧಾನಿ ದೆಹಲಿಯಲ್ಲಿರುವ ಒಟ್ಟು 5 ದುಬಾರಿ ಫ್ಲ್ಯಾಟ್ ಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿತ್ತು.