ಶಿಮ್ಲಾ: ಕಳೆದ ಒಂದು ವಾರದಿಂದ ಉತ್ತರ ಭಾರತದಾದ್ಯಂತ ಅಬ್ಬರಿಸುತ್ತಿರುವ ವರುಣನ ಆರ್ಭಟ ಹಿಮಾಚಲ ಪ್ರದೇಶದಲ್ಲಿ ಸೋಮವಾರವೂ ಮುಂದುವರೆದಿದ್ದು, ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಮೂರು ದಿನಗಳಿಂದ ಸತತ ಮಳೆಯಾಗಿದ್ದು, ಸಿರ್ಮುರಾ ಜಿಲ್ಲೆಯ ದಾದಾಹು-ರೇಣುಕಾ ಹೆದ್ದಾರಿಯಲ್ಲಿ ಮಳೆಯಿಂದಾಗಿ ಗಿರ್ಪುಲ್ ಬಳಿ ಭೂ ಕುಸಿತ ಸಂಭವಿಸಿದ್ದು, ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಡೆಹ್ರಾ ಗೋಪಿಪುರ ಒಂದರಲ್ಲೇ ಕಳೆದ 24 ಗಂಟೆಯಲ್ಲಿ ಅತೀ ಹೆಚ್ಚು ಪ್ರಮಾಣದ ಅಂದರೆ 196 ಮಿ. ಮೀ ಮಳೆಯಾಗಿದೆ. ಉಳಿದಂತೆ ಸಲೋನಿ, ನೈನಾ ದೇವಿ, ಕಾಂಗ್ರಾ, ಡಾಲ್ ಹೌಸಿ, ಧರಂ ಪುರ್, ಸರ್ಕಾಘಾಟ್, ಚಂಬಾ, ಸೋಲನ್, ಸುಂದರ್ ನಗರ್ ಮತ್ತು ಉನಾ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ.
ಅಲ್ಲದೆ ಮಳೆ ನೀರಿನ ಪ್ರವಾಹದಿಂದಾಗಿ ಹಲವು ಮನೆಗಳು ಜಖಂಗೊಂಡಿದ್ದು, ಹಲವು ಗುಡಿಸಲುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಮುಂಜಾಗ್ರತಾ ಕ್ರಮವಾಗಿ ಹಿಮಾಚಲ ಪ್ರದೇಶ ಸರ್ಕಾರ ಎನ್ ಡಿಆರ್ ಎಫ್ ತಂಡವನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಅಲ್ಲದೆ ಪ್ರವಾಹ ಪರಿಸ್ಥಿತಿ ತಲೆದೋರಿರುವ ಗ್ರಾಮಗಳಲ್ಲಿ ಬೋಟ್ ಗಳನ್ನು ರವಾನೆ ಮಾಡಲಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಕೂಡ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ, ಮೇಘಸ್ಫೋಟ ಸಾಧ್ಯತೆ
ಇದೇ ವೇಳೆ ಕೇಂದ್ರ ಹವಾಮಾನ ಇಲಾಖೆ ಮುಂದಿನ 48 ಗಂಟೆಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟವಾಗುವ ಸಾಧ್ಯತೆಗಳಿದ್ದು, ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.