ಮುಂಬೈ: ವಾಣಿಜ್ಯ ನಗರ ಮುಂಬೈನ 8 ರೈಲು ನಿಲ್ದಾಣಗಳಿಗೆ ಪ್ರಯಾಣಿಕ ಸೌಕರ್ಯಗಳೊಂದಿಗೆ ಉಚಿತ ವೈ-ಫೈ ಸೌಲಭ್ಯವನ್ನು ಭಾರತೀಯ ರೈಲ್ವೆ ಇಲಾಖೆ ಆರಂಭಿಸಿದೆ.
8 ನಿಲ್ದಾಣಗಳಿಗೆ ಬ್ರಾಡ್ ಬ್ಯಾಂಡ್ ಅಂತರ್ಜಾಲ ಸೇವೆಯನ್ನು ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಉದ್ಘಾಟಿಸಿದ್ದಾರೆ.
ಚರ್ಚ್ ಗೇಟ್, ಬಾಂದ್ರಾ, ಬಾಂದ್ರಾ ಟರ್ಮಿನಸ್, ದಾದರ್, ಖಾರ್. ಕಲ್ಯಾಣ್, ಲೋಕಮಾನ್ಯ ತಿಲಕ್ ಟರ್ನಿನಸ್, ದಾದರ್ (ಕೇಂದ್ರ ರೈಲ್ವೆ) ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯವನ್ನು ಒದಗಿಸಲಾಗಿದೆ.
ಇಂಟರ್ನೆಟ್ ಸೇವೆಯು ಪ್ರಯಾಣಿಕರಿಗೆ ಮೊದಲ 30 ನಿಮಿಷಗಳ ಕಾಲ ವೇಗಗತಿಯಲ್ಲಿ ಕೆಲಸ ಮಾಡಲಿದ್ದು, ನಂತರ ಇದರ ವೇಗ ನಿಧಾನಗತಿಯಲ್ಲಿ ಕಡಿತಗೊಳ್ಳಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ವೈ-ಫೈ ಸೇವೆಯನ್ನು Railwire ಅಡಿಯಲ್ಲಿ ಒದಗಿಸಲಾಗುತ್ತಿದ್ದು, ಮುಂಬೈನ 17 ಉಪನಗರ ನಿಲ್ದಾಣಗಳನ್ನು ವೈ-ಫೈ ಅಳವಡಿಕೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ವೈ-ಫೈ ಸೇವೆಯನ್ನು Railtel ಅಡಿಯಲ್ಲಿ ಒದಗಿಸಲಾಗುತ್ತಿದೆ.
ರೈಲ್ವೆ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಉಚಿತವಾಗಿ ಇಂಟರ್ನೆಟ್ ಮೂಲಕ ರೈಲಿನ ಕುರಿತಂತೆ ಹಾಗೂ ಇನ್ನಿತರೆ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಇದಲ್ಲದೆ ಸುರೇಶ್ ಪ್ರಭು ಅವರು ಅಂಧೇರಿ ಹಾಗೂ ಗೋರೆಗಾಂವ್ ನಿಲ್ದಾಣಗಳಲ್ಲಿ 2 ರೈಲು ಪ್ಲಾಟ್ ಫಾರ್ಮ್ ಗಳನ್ನು, ಶಹದ್ ನಿಲ್ದಾಣಗಳಲ್ಲಿ ಎಸ್ಕಲೇಟರ್ ಸಹಿತ ಪಾದಚಾರಿ ಸೇತುವೆಯನ್ನು ಉದ್ಘಾಟಿಸಿದರು. ಅಲ್ಲದೆ, ರು.2 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಛತ್ರಪತಿ ಶಿವಾಜಿ ಟರ್ಮಿನಸ್ ನಲ್ಲಿ ಮಹಿಳೆಯರಿಗೆ 20 ಹಾಗೂ ಪುರುಷರಿಗೆ 54 ಮಂಚಗಳಿರುವ ಎಸಿ ಮಲಗುವ ಕೋಣೆಗಳನ್ನು ಉದ್ಘಾಟಿಸಿದರು.