ಅಹ್ಮದಾಬಾದ್: ಗುಜರಾತ್ ಪತ್ರಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತರನ್ನು ಫಿರೋಜ್ ಕಸಂಭಾಯ್ ಹಲಾ, ಸಂಜಯ್ ರಾಮ ರಾಥೋಡ್ ಮತ್ತು ಅರಿಫ್ ಅಲಾಮ್ ಸೈಯಿದ್ ಎಂದು ಹೇಳಲಾಗುತ್ತಿದೆ.
ಕಿಶೋರ್ ದಾವೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರನ್ನು ಬಂಧನಕ್ಕೊಳಪಡಿಸಲಾಗಿದೆ. ತನಿಖೆ ವೇಳೆ ದಾವೆ ಅವರು ಆರೋಪಿಗಳೊಂದಿಗೆ ಕಳೆದ 5 ವರ್ಷಗಳಿಂದ ಸಾರಿಗೆ ವ್ಯವಹಾರವೊಂದರಲ್ಲಿ ಸಂಪರ್ಕವನ್ನು ಹೊಂದಿರುವುದಾಗಿ ತಿಳಿದುಬಂದಿತ್ತು. ಹಣದ ವಿಚಾರವಾಗಿ ಆರೋಪಿಗಳೊಂದಿಗೆ ಮನಸ್ತಾಪವುಂಟಾಗಿದೆ. ಈ ಹಿನ್ನೆಲೆಯಲ್ಲಿ ದಾವೆಯವರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಎಂ.ಎಂ. ಮಕ್ವಾನಾ ಅವರು ಹೇಳಿದ್ದಾರೆ.
ತನಿಖೆ ವೇಳೆ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಲಾಗಿತ್ತು. ದಾವೆಯವರು ಕೆಲಸ ಮಾಡುತ್ತಿದ್ದ ಕಚೇರಿ ಬಳಿ ಎರಡು ಬೈಕ್ ಗಳು ನಿಂತಿದ್ದವು. ಇದೇ ಕೊಲೆಯ ರಹಸ್ಯ ಭೇದಿಸಲು ಸಹಾಯಕವಾಯಿತು ಎಂದು ಅವರು ಹೇಳಿದ್ದಾರೆ.