ಹಳಿ ತಪ್ಪಿದ ತಿರುವನಂತಪುರಂ-ಮಂಗಳೂರು ಎಕ್ಸ್ ಪ್ರೆಸ್: 12 ಬೋಗಿಗಳು ಪಲ್ಟಿ, ತಪ್ಪಿದ ದುರಂತ
ಕೇರಳದ ತಿರುವನಂತಪುರಂನಿಂದ ಮಂಗಳೂರಿಗೆ ತೆರಳುತ್ತಿದ್ದ ಎಕ್ಸ್ ಪ್ರೆಸ್ ರೈಲೊಂದು ಹಳಿತಪ್ಪಿದ್ದು, 12 ಬೋಗಿಗಳು ಮುಗುಚಿ ಬಿದ್ದಿರುವ ಘಟನೆಯೊಂದು ಕರುಕುಟ್ಟಿ...
ತಿರುವನಂತಪುರಂ: ಕೇರಳದ ತಿರುವನಂತಪುರಂನಿಂದ ಮಂಗಳೂರಿಗೆ ತೆರಳುತ್ತಿದ್ದ ಎಕ್ಸ್ ಪ್ರೆಸ್ ರೈಲೊಂದು ಹಳಿತಪ್ಪಿದ್ದು, 12 ಬೋಗಿಗಳು ಮುಗುಚಿ ಬಿದ್ದಿರುವ ಘಟನೆಯೊಂದು ಕರುಕುಟ್ಟಿ ನಿಲ್ದಾಣದ ಬಳಿ ಭಾನುವಾರ ನಡೆದಿದೆ.
ಎರ್ನಾಕುಲಂ ಜಿಲ್ಲೆಯ ಅಲುವಾ ಮತ್ತು ಕರುಕುಟ್ಟಿ ನಿಲ್ದಾಣದಲ್ಲಿ ಬೆಳಗಿನ ಜಾವ 2.30ರ ಸುಮಾರಿಗೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಘಟನೆ ವೇಳೆ ಯಾವುದೇ ಗಾಯಗಳಾಗಲಿ, ಪ್ರಾಣಾಪಾಯಗಳಾಗಲಿ ಸಂಭವಿಸಿಲ್ಲ ಎಂದು ದಕ್ಷಿಣ ರೈಲ್ವೆ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆ ನಂತರ ಪ್ರಯಾಣಿಕರಿಗೆ ತೊಂದರೆಯುಂಟಾಗಬಾರದೆಂದು ಅಧಿಕಾರಿಗಳು ಬಸ್ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಘಟನೆ ಪರಿಣಾಮ ರೈಲ್ವೆ ಹಳಿಗಳು ಹಾಳಾಗಿದ್ದು, ದುರಸ್ತಿಗೊಳಿಸಲು ಸುಮಾರು 10 ಗಂಟೆಗೂ ಹೆಚ್ಚು ಕಾಲ ಬೇಕಾಗುತ್ತದೆ. ಹೀಗಾಗಿ, ಕೇರಳದ ಕೆಲ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಇನ್ನೂ ಕೆಲ ರೈಲುಗಳ ಪಥ ಸಂಚಾರವನ್ನು ಬದಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೂಲಗಳ ಪ್ರಕಾರ ತಿರುವನಂತಪುರ-ಮುಂಬೈ, ಕನ್ಯಾಕುಮಾರಿ-ಬೆಂಗಳೂರು, ಆಲಪುಳ-ಧನ್ಬಾದ್, ತಿರುವನಂತಪುರ-ಗೋರಕ್ಪುರ ರಪ್ತಿಸಾಗರ್, ತಿರುವನಂತಪುರ-ಹೈದರಾಬಾದ್ ಶತಾಬ್ಜಿ ಎಕ್ಸ್ ಪ್ರೆಸ್ ರಂತಹ 5 ದೂರದ ರೈಲುಗಳ ಪಥ ಸಂಚಾರವನ್ನು ಬದಲಿಸಲಾಗಿದೆ. ಅಲ್ಲದೆ, ಅಮೃತಾ ಎಕ್ಸ್ ಪ್ರೆಸ್, ನಿಲಂಬೂರ್ ರಾಜ್ಯರಾಣಿ ಎಕ್ಸ್ ಪ್ರೆಸ್, ಎಗ್ಮೋರ್ - ಗುರುವಾಯೂರ್ ಎಕ್ಸ್ ಪ್ರೆಸ್ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಅಪೂರ್ಣ ಪ್ರಯಾಣಕ್ಕಾಗಿ ಪ್ರಯಾಣಿಕರಿಗೆ ಅವರ ಹಣವನ್ನು ಮರುಪಾವತಿ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಆನ್ ಲೈನ್ ನಲ್ಲಿ ಬುಕ್ ಮಾಡಿದವರಿಗೆ ಸ್ವಯಂಚಾಲಿತವಾಗಿ ಹಣವನ್ನು ಮರುಪಾವತಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರೈಲ್ವೆ ಇಲಾಖೆಯ ಸಹಾಯವಾಣಿ ಸಂಖ್ಯೆ: ತ್ರಿಸ್ಸೂರು 0487 2429241, ಎರ್ನಾಕುಲಂ 0484 2100317, ತಿರುನಂತಪುರಂ 0471 1072.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.