ನವದೆಹಲಿ: ಪಂಜಾಬ್ ನ ಪಠಾಣ್‌ಕೋಟ್ ವಾಯುನೆಲೆ ಮೇಲೆ ನಡೆದ ಉಗ್ರ ದಾಳಿಯು ಪಾಕಿಸ್ತಾನ ನೆಲದಿಂದಲೇ ಹೊರಹೊಮ್ಮಿತ್ತು ಎಂಬುದನ್ನು ಸಾಬೀತು ಪಡಿಸುವ ಸಾಕ್ಷ್ಯಗಳನ್ನು ಒದಗಿಸುವ ಮೂಲಕ ಅಮೆರಕ, ಭಾರತದ ನಿಲುವನ್ನು ಮತ್ತಷ್ಟು ಬಲಪಡಿಸಿದೆ.
ಕಳೆದ ಜನವರಿ 2ರಂದು ಪಠಾಣ್‌ಕೋಟ್ ವಾಯು ನೆಲೆ ಮೇಲೆ ದಾಳಿ ನಡೆಸಿದ್ದು ಪಾಕ್ ಉಗ್ರರೇ ಎಂದು ಭಾರತ ಆ ಸಂದರ್ಭದಲ್ಲೇ ಆರೋಪಿಸಿತ್ತು. ಇದೀಗ ಅಮೆರಿಕವು ನೀಡಿರುವ ಪುರಾವೆಗಳಿಂದ ಪಠಾಣ್‌ಕೋಟ್ ದಾಳಿ ಪಾಕ್ ನೆಲದಿಂದಲೇ ನಡೆದಿತ್ತು ಎಂಬುದನ್ನು ಖಚಿತಪಡಿಸಿದೆ.
ಪಾಕ್ ಕೈವಾಡದ ಬಗ್ಗೆ ಅಮೆರಿಕ ಸಾಕ್ಷ್ಯ ಒದಗಿಸಿದ ಹಿನ್ನೆಲೆಯಲ್ಲೀಗ ರಾಷ್ಟ್ರೀಯ ತನಿಖಾ ದಳ ಈಗ ಪಾಕ್ ಮೂಲದ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ವಿರುದ್ಧ ಚಾರ್ಜ್ ಶೀಟ್ ದಾಖಲಿಸುವ ಬಗ್ಗೆ ಚಿಂತನೆ ನಡೆಸಿದೆ.
ಪಠಾಣ್‌ಕೋಟ್ ದಾಳಿಯನ್ನು ಪ್ರವರ್ತಿಸಿರುವ ಪಾಕ್ ಮೂಲದ ಜೆಇಎಂ ನಿರ್ವಾಹಕರ ಫೇಸ್ ಬುಕ್ ಖಾತೆಯ ಐಪಿ (ಇಂಟರ್‌ನೆಟ್ ಪ್ರೋಟೋಕಾಲ್) ವಿಳಾಸ ಮತ್ತು ಈ ಉಗ್ರ ಸಂಘಟನೆಯ ಹಣಕಾಸು ಶಕ್ತಿಯಾಗಿರುವ ಅಲ್ ರೆಹಮತ್ ಟ್ರಸ್ಟ್ ಇದರ ವೆಬ್‌ಸೈಟ್‌ನ ಐಪಿ ವಿಳಾಸವು ಪಾಕಿಸ್ಥಾನದಲ್ಲೇ ಇರುವುದನ್ನು ದೃಢಪಡಿಸುವ ದಾಖಲೆಗಳನ್ನು ಅಮೆರಿಕವು ರಾಷ್ಟ್ರೀಯ ತನಿಖಾ ದಳಕ್ಕೆ ನೀಡಿದ್ದು, ಪಾಕ್ ನಿಜ ಬಣ್ಣವನ್ನು ಬಯಲು ಮಾಡಿದೆ.