ಶ್ರೀನಗರ: ಪ್ರತ್ಯೇಕತಾವಾದಿಗಳು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದರಿಂದ ಕಾಶ್ಮೀರದ ಮೂರು ಸ್ಥಳಗಳಲ್ಲಿ ಅಧಿಕಾರಿಗಳು ಮತ್ತೆ ಇಂದು(ಗುರುವಾರ) ಕರ್ಫ್ಯೂ ಹೇರಿದ್ದಾರೆ.
ನೊವ್ ಹಟ್ಟಾ ಮತ್ತು ಶ್ರೀನಗರ ಪಟ್ಟಣದ ಎಂ.ಆರ್. ಗುಂಜ್ ಪೊಲೀಸ್ ಠಾಣೆಗಳು ಮತ್ತು ಬರಮುಲ್ಲಾದಲ್ಲಿ ಮತ್ತೆ ಇಂದು ಕರ್ಫ್ಯೂ ಹೇರಲಾಗಿದೆ.
ಜುಲೈ 9ರ ನಂತರ ಸತತ 53 ದಿನಗಳ ಬಳಿಕ ಕಾಶ್ಮೀರದಲ್ಲಿ ನಿನ್ನೆ ಕರ್ಫ್ಯೂ ಹಿಂತೆಗೆದುಕೊಳ್ಳಲಾಗಿತ್ತು. ನಿನ್ನೆ ಬರಮುಲ್ಲಾ ಜಿಲ್ಲೆಯ ರಫಿಯಾಬಾದ್ ಪ್ರದೇಶದಲ್ಲಿ ಸೇನೆ ಬೆಂಗಾವಲ ಮೇಲೆ ಗುಂಪೊಂದು ಕಲ್ಲು ಎಸೆದದ್ದಕ್ಕೆ ಭದ್ರತಾ ಪಡೆ ನಡೆಸಿದ ದಾಳಿಯಲ್ಲಿ ದನೀಶ್ ಅಹ್ಮದ್ ಎಂಬ 18 ವರ್ಷದ ಯುವಕ ಮೃತಪಟ್ಟಿದ್ದಾನೆ.
ಉದ್ರಿಕ್ತ ಗುಂಪು ಕುಲ್ಗಾಮ್ ಜಿಲ್ಲೆಯ ಚವಲ್ಗಮ್ ಗ್ರಾಮದಲ್ಲಿ ಪಿಡಿಪಿ ರಾಜ್ಯಸಭಾ ಸದಸ್ಯ ನಜೀರ್ ಅಹ್ಮದ್ ಲವೈ ಅವರ ಮನೆ ಮೇಲೆ ಕೂಡ ದಾಳಿ ನಡೆಸಿದೆ.
ಪ್ರತ್ಯೇಕತಾವಾದಿಗಳು ಇಂದು ಮತ್ತೆ ಆರಂಭಿಸಿರುವ ಪ್ರತಿಭಟನೆಯನ್ನು ಸೆಪ್ಟೆಂಬರ್ 8ರವರೆಗೆ ಮುಂದುವರಿಸಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ಕಳೆದ 55 ದಿನ ಕಾಶ್ಮೀರ ಕಣಿವೆಯಲ್ಲಿ ನಡೆದಿದ್ದ ಬಂದ್ ನಿಂದ ಅಲ್ಲಿನ ಜನಜೀವನ ಸಂಪೂರ್ಣ ಸ್ಥಗಿತವಾಗಿತ್ತು. ಅಂಗಡಿ, ಮಾರುಕಟ್ಟೆ, ಸಾರ್ವಜನಿಕ ಸಾರಿಗೆ ಮುಂತಾದವುಗಳು ಸಂಪೂರ್ಣ ಬಂದ್ ಆಗಿದ್ದವು. ಈ ಸಮಯದಲ್ಲಿ ನಡೆದ ಗಲಭೆಯಲ್ಲಿ 69 ನಾಗರಿಕರು ಮತ್ತು ಮೂವರು ಪೊಲೀಸರು ಸೇರಿದಂತೆ ಒಟ್ಟು 72 ಮಂದಿ ಮೃತಪಟ್ಟಿದ್ದು, 11 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics