ದೇಶ

ಸೇನೆ ಮೂಲಕ ಪರಿಹಾರ ಕಂಡುಕೊಂಡಿದ್ದರೆ ಪಿಒಕೆ ನಮ್ಮದಾಗುತ್ತಿತ್ತು: ಐಎಎಫ್ ಮುಖ್ಯಸ್ಥ

Lingaraj Badiger
ನವದೆಹಲಿ: ಕಾಶ್ಮೀರ ಸಮಸ್ಯೆಯನ್ನು 'ನೈತಿಕ ನೆಲೆಗಟ್ಟಿ'ನ ಮೇಲೆ ಪರಿಹಾರ ಕಂಡುಕೊಳ್ಳುವ ಬದಲು ಸೇನೆಯ ಮೂಲಕ ಪರಿಹಾರ ಕಂಡುಕೊಂಡಿದ್ದರೆ ಪಾಕ್ ಆಕ್ರಮಿತ ಕಾಶ್ಮೀರ ನಮ್ಮದಾಗುತ್ತಿತ್ತು ಎಂದು ಭಾರತೀಯ ವಾಯು ಪಡೆ(ಐಎಎಫ್) ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅರುಪ್ ರಹಾ ಅವರು ಗುರುವಾರ ಹೇಳಿದ್ದಾರೆ.
1971ರ ಭಾರತ-ಪಾಕ್ ಯುದ್ಧದವರೆಗೂ ವಾಯುಪಡೆಯ ಸಂಪೂರ್ಣ ಶಕ್ತಿಯನ್ನು ಬಳಸಿಕೊಳ್ಳಲಾಗಿಲ್ಲ ಎಂದಿರುವ ವಾಯುಪಡೆ ಮುಖ್ಯಸ್ಥ, ಪಾಕ್ ಆಕ್ರಮಿತ ಕಾಶ್ಮೀರ ಒಂದು ರೀತಿ ಮುಳ್ಳಿದ್ದಂತೆ ಎಂದಿದ್ದಾರೆ. ಅಲ್ಲದೆ ಭಾರತ ಭದ್ರತಾ ಅಗತ್ಯಗಳಿಗಾಗಿ ವ್ಯಾವಹಾರಿಕ ಮಾರ್ಗ ಅನುಸರಿಸಿಲ್ಲ ಎಂದು ಹೇಳಿದ್ದಾರೆ.
ಅಂತರಿಕ್ಷಯಾನ ಕುರಿತ ಕಾರ್ಯಾಗಾರವೊಂದರಲ್ಲಿ ಮಾತನಾಡಿದ ಅರುಪ್ ರಹಾ ಅವರು, ಉದಾತ್ತ ಚಿಂತನೆಗಳಿಗೆ ಜೋತು ಬಿದ್ದಿರುವ ನಾವು ತಾರ್ಕಿಕ ಮಾರ್ಗ ಅನುಸರಿಸುವುದಿಲ್ಲ. ದೇಶದ ಭದ್ರತೆ ವಿಚಾರದಲ್ಲಿ ಸೇನಾ ಶಕ್ತಿಯ ಬಳಕೆಯನ್ನು ಕಡೆಗಣಿಸಲಾಗಿದೆ. ಪಿಒಕೆ ಸಮಸ್ಯೆ ಪರಿಹರಿಸಿಕೊಳ್ಳಲು ನಾವು ವಿಶ್ವಸಂಸ್ಥೆ ಬಳಿ ಹೋದೆವು. ಆದರೆ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ. ಹೀಗಾಗಿ ಪಿಒಕೆ ಈಗಲೂ ನಮಗೆ ಮುಳ್ಳಾಗಿ ಕಾಡುತ್ತಿದೆ ಎಂದು ಹೇಳಿದ್ದಾರೆ.

ನಮ್ಮ ವಿದೇಶಾಂಗ ನೀತಿ ವಿಶ್ವಸಂಸ್ಥೆ, ಅಲಿಪ್ತ ನೀತಿ ಹಾಗೂ ಪಂಚಶೀಲ ಸಿದ್ಧಾಂತದಡಿ ಸ್ಥಾಪಿತವಾಗಿದೆ. ನಾವು ಉನ್ನತ ಆದರ್ಶಗಳನ್ನು ಹೊಂದಿದ್ದು, ಭದ್ರತಾ ಅಗತ್ಯಗಳಿಗಾಗಿ ವ್ಯವಹಾರಿಕ ಮಾರ್ಗವನ್ನು ಅನುಸರಿಸುವುದಿಲ್ಲ ಎಂದು ವಾಯುಪಡೆ ಮುಖ್ಯಸ್ಥರು ಹೇಳಿದ್ದಾರೆ.
SCROLL FOR NEXT