ಮುಜಾಫರ್ನಗರ: ಬಂಧನಕ್ಕೊಳಗಾಗಿದ್ದ ಆರೋಪಿಯೊಬ್ಬ ಪೊಲೀಸರ ಮೇಲೆ ದಾಳಿ ಮಾಡಿ ಜೈಲಿನಿಂದ ಪರಾರಿಯಾಗಿದ್ದು, ದಾಳಿ ವೇಳೆ ನಾಲ್ವರು ಪೊಲೀಸರು ಗಾಯಗೊಂಡಿರುವ ಘಟನೆ ಶಾಮ್ಲಿ ಜಿಲ್ಲೆಯಲ್ಲಿ ಭಾನುವಾರ ಸಂಜೆ ನಡೆದಿದೆ.
ಮಾದಕ ವಸ್ತು ಕಳ್ಳಸಾಗಣೆ ಪ್ರಕರಣವೊಂದರಲ್ಲಿ ಅಲೀಮ್ ಎಂಬ ಆರೋಪಿಯನ್ನು ಪೊಲೀಸರು ಕೆಲ ದಿನಗಳ ಹಿಂದಷ್ಟೇ ಬಂಧನಕ್ಕೊಳಪಡಿಸಿದ್ದರು. ನಿನ್ನೆ ಆತನ ಬೆಂಬಲಿಗರು ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ್ದು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ನಂತರ ಆರೋಪಿಯನ್ನು ಕರೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆಂದು ಪೊಲಿಸ್ ವರಿಷ್ಠಾಧಿಕಾರಿ ಅಜಯ್ಪಾಲ್ ಶರ್ಮಾ ಅವರು ಹೇಳಿದ್ದಾರೆ.
ಸಬ್ ಇನ್ಸ್ ಪೆಕ್ಟರ್ ಆದೇಶ್ ಕುಮಾರ್, ಜಿತೇಂದರ್ ಸಿಂಗ್, ಅರವಿಂದ ಸಿಂಗ್ ಹಾಗೂ ಪೇದೆ ಷಕೀಲ್ ಗಾಯಗೊಂಡ ಪೊಲೀಸರಾಗಿದ್ದಾರೆಂದು ಹೇಳಲಾಗುತ್ತಿದೆ. ಪರಾರಿಯಾಗಿರುವ ಆರೋಪಿಗಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.