ನವದೆಹಲಿ: ಸಂಸತ್ ನ ಚಳಿಗಾಲದ ಕೊನೆಯ ದಿನದ ಅಧಿವೇಶನವೂ ಸಹ ವಿಪಕ್ಷಗಳ ಗದ್ದಲಕ್ಕೆ ಬಲಿಯಾಗಿದ್ದು ಸಂಸತ್ ನ ಅಧಿವೇಶನ ಬಹುತೇಕ ವ್ಯರ್ಥವಾಗಿದೆ.
ನೋಟು ನಿಷೇಧದ ವಿಚಾರವಾಗಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ರಾಜ್ಯಸಭೆಯಲ್ಲಿ ಡಿ.16 ರಂದೂ ಸಹ ಗದ್ದಲ ಉಂಟು ಮಾಡಿದ್ದರ ಪರಿಣಾಮವಾಗಿ ರಾಜ್ಯಸಭೆಯ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಮೇಲ್ಮನೆಯ ನಿಯಮಗಳನ್ನು ಗಾಳಿಗೆ ತೂರಿ, ಘೋಷಣೆ ಕೂಗುವುದು ಹಾಗೂ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಗಿದ್ದು, ಅಧಿವೇಶನ ವ್ಯರ್ಥಗೊಂಡಿದೆ ಎಂದು ರಾಜ್ಯಸಭೆಯ ಅಧ್ಯಕ್ಷ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಬೇಸರ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ನ ಸಂಸದೀಯ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಕಾಂಗ್ರೆಸ್ ನಿಯೋಗ ರಾಷ್ಟ್ರಪತಿಗಳನ್ನು ಭೇಟಿ ಮಾಡಿದ್ದು, ನೋಟು ನಿಷೇಧ ಕ್ರಮವನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಅಹವಾಲು ನೀಡಿದ್ದಾರೆ. ರಾಷ್ಟ್ರಪತಿಗಳನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಕಾಂಗ್ರೆಸ್ ನ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ನೋಟು ನಿಷೇಧ ಕ್ರಮದಿಂದ ಜನಸಾಮಾನ್ಯರಿಗೆ ಉಂಟಾಗಿರುವ ಸಮಸ್ಯೆಯನ್ನು ರಾಷ್ಟ್ರಪತಿಗಳಿಗೆ ವಿವರಿಸಿದ್ದೇವೆ ಎಂದು ಹೇಳಿದ್ದಾರೆ.
" ನೋಟು ನಿಷೇಧದಿಂದ ಜನರು ಸಾವನ್ನಪ್ಪಿರುವುದರ ಬಗ್ಗೆ ಹಾಗೂ ಜನಸಾಮಾನ್ಯರು ಎದುರಿಸಿದ ಸಂಕಷ್ಟದ ಬಗ್ಗೆ ಸಂಸತ್ ನ ಅಧಿವೇಶನದಲ್ಲಿ ಚರ್ಚಿಸಲು ಬಯಸಿದ್ದೆವು. ಆದರೆ ಕೇಂದ್ರ ಸರ್ಕಾರ ಚರ್ಚೆಗೆ ಅವಕಾಶ ನೀಡಲಿಲ್ಲ. ಈ ಬಗ್ಗೆ ಎಲ್ಲವನ್ನೂ ರಾಷ್ಟ್ರಪತಿಗಳಿಗೆ ವಿವರಿಸಿದ್ದೇವೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.