ನವದೆಹಲಿ: ವಿಶಾಖ ಪಟ್ಟಣದ ಎಂಜಿನೀಯರ್ ಒಬ್ಬರು ಶೂ ಖರೀದಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ 364 ರೂಪಾಯಿ ಹಣವನ್ನು ಕಳುಹಿಸಿರುವ ವಿಷಯ ಬೆಳಕಿಗೆ ಬಂದಿದೆ
ಗಣರಾಜ್ಯೋತ್ಸವ ದಿನದಂದು ರಾಷ್ಟ್ರಪತಿ ಭವನದಲ್ಲಿ ನಡೆದ ಔತಣಕೂಟದಲ್ಲಿ ಭಾಗವಹಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಚಪ್ಪಲಿ ಧರಿಸಿದ್ದು ವಿಶಾಖಪಟ್ಟಣದ ಮೆಕ್ಯಾನಿಕಲ್ ಎಂಜಿನೀಯರ್ ಸುಮಿತ್ ಅಗರ್ವಾಲ್ ಅವರಿಗೆ ಸಿಟ್ಟು ಬರಲು ಕಾರಣವಾಗಿದೆ. ರು. 364 ಹಣವನ್ನು ಡಿಡಿ ಕಳುಹಿಸಿರುವ ಸುಮಿತ್ ಅಗರ್ವಾಲ್ ಮತ್ತೊಮ್ಮೆ ದೇಶವನ್ನು ಮುಜುಗರಕ್ಕೀಡು ಮಾಡಬಾರದೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ರಾಷ್ಟ್ರಪತಿ ಭವನದಲ್ಲಿ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಫ್ರಾನ್ಸ್ ಅಧ್ಯಕ್ಷ ಫ್ರಾಂಕೊಯಿಸ್ ಹೊಲಾಂಡೆ ಪಾಲ್ಗೊಂಡಿದ್ದರು. ಈ ವೇಳೆ ಏರ್ಪಡಿಸಿದ್ದ ಔತಣಕೂಟದಲ್ಲಿ ಕೇಜ್ರಿವಾಲ್ ಚಪ್ಪಲಿ ಹಾಕಿಕೊಂಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು,
ರಾಷ್ಟ್ರಪತಿ ಭವನದಲ್ಲಿ ನಡೆದ ಔತಣಕೂಟದಲ್ಲಿ ಕೇಜ್ರಿವಾಲ್ ದೇಶದ ಪ್ರತಿನಿಧಿಯಾಗಿ ಭಾಗವಹಿಸಬೇಕು. ಅವರೇನು ರಾಮಲೀಲಾ ಅಥವಾ ಜಂತರ್ ಮಂತರ್ ನಲ್ಲಿ ಆಮ್ ಆದ್ಮಿ ಪಕ್ಷ ನಡೆಸುವ ಧರಣಿಯಲ್ಲಿ ಭಾಗವಹಿಸಿದ್ದಲ್ಲ ಎಂದು ಸುಮಿತ್ ಅಗರ್ವಾಲ್ ಹೇಳಿದ್ದಾರೆ.