ನವದೆಹಲಿ: ದೆಹಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆಯೊಂದು ಬುಧವಾರ ಕೆಲವು ಗಂಟೆಗಳ ಕಾಲ ಆತಂಕದ ವಾತಾವರಣವನ್ನು ನಿರ್ಮಾಣ ಮಾಡಿತ್ತು.
ಇಂದು ಬೆಳಗಿನ ಜಾವ 2.30 ಸುಮಾರಿಗೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅನಾಮಧೇಯ ಕರೆಯೊಂದು ಬಂದಿದೆ. ಫೋನಿನಲ್ಲಿ ಮಾತನಾಡಿದ ವ್ಯಕ್ತಿಯೊಬ್ಬ ಅಮೃತರಸರಿದಿಂದ ಓರ್ವ ವ್ಯಕ್ತಿ ನಿಲ್ದಾಣಕ್ಕೆ ಬಂದಿದ್ದು, ಆತ ಭಯೋತ್ಪಾದಕನಾಗಿದ್ದಾನೆಂದು ಹೇಳಿದ್ದಾರೆ.
ನಂತರ ಸಿಬ್ಬಂದಿಗಳು ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿಯನ್ನು ಮುಟ್ಟಿಸಿದ್ದಾರೆ. ನಂತರ ಭದ್ರತಾ ಸಿಬ್ಬಂದಿಗಳನ್ನು ಕರೆದ ಅಧಿಕಾರಿಗಳು ನಿಲ್ದಾಣದಾದ್ಯಂತ ತಪಾಸಣೆ ನಡೆಸುವಂತೆ ತಿಳಿಸಿದ್ದಾರೆ. ಅಲ್ಲದೆ, ನಿಲ್ದಾಣದಲ್ಲಿದ್ದ ಪ್ರತಿಯೊಬ್ಬರನ್ನು ತಪಾಸಣೆಗೊಳಪಡಿಸಿದ್ದಾರೆ. ಇದರಿಂದಾಗಿ ನಿಲ್ದಾಣದಲ್ಲಿ ಕೆಲವು ಗಂಟೆಗಳ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ 3.30ರ ಸುಮಾರಿಗೆ ಅಧಿಕಾರಿಗಳು ಇದೊಂದು ಹುಸಿ ಕರೆಯೆಂದು ಘೋಷಿಸಿದ್ದಾರೆ.