ಇಂದೋರ್: ಕೇಂದ್ರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸ್ಮಾರ್ಟ್ ಸಿಟಿ ಆಯ್ಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಕೇಳಿಬಂದಿರುವ ಆರೋಪವನ್ನು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ತಳ್ಳಿಹಾಕಿದ್ದಾರೆ.
ಇಂದೋರ್ ನಲ್ಲಿ ಸ್ಮಾರ್ಟ್ ಸಿಟಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಆಯ್ಕೆಯಲ್ಲಿ ಯಾವುದೇ ತಾರತಮ್ಯ ಎಸಗಿಲ್ಲ. ಇದರಿಂದ ನಾನಾಗಲಿ ಅಥವಾ ಬಿಜೆಪಿಯಾಗಲಿ ಮಾಡುವಂತದ್ದು ಏನೂ ಇಲ್ಲ ಎಂದು ಅವರು ಹೇಳಿದ್ದಾರೆ.
ಉತ್ತಮ ಕಾರ್ಯವೈಖರಿ ನಡೆಸುವುದಕ್ಕಾಗಿ ಸಾಧ್ಯವಾಗುವ ನಗರಗಳನ್ನು ಸ್ಮಾರ್ಟ್ ಸಿಟಿಗಾಗಿ ಆಯ್ಕೆ ಮಾಡಲಾಗಿದೆ. ನಿಯಮಗಳ ಅನುಸಾರವಾಗಿ ಆಯ್ಕೆ ಮಾಡಲಾಗಿದೆ.
ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟ ಕೆಲವು ನಗರಗಳನ್ನು ಸ್ಮಾರ್ಟ್ ಸಿಟಿ ಮೊದನೇ ಹಂತದಲ್ಲಿ ಕೈಬಿಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರವಾದ ವಾರಣಾಸಿ ಸೇರಿಂದತೆ ಅನೇಕ ಕೇಂದ್ರ ಸಚಿವರ ಕ್ಷೇತ್ರಗಳನ್ನು ಕೂಡ ಆಯ್ಕೆ ಮಾಡಿಲ್ಲ.
ತಾರತ್ಯಮವೆಸಗಲಾಗಿದೆ ಎಂದು ಮಾತನಾಡುವ ರಾಜ್ಯ ಸರ್ಕಾರಗಳು ಮತ್ತು ನಗರ ಕೇಂದ್ರಗಳು, ಅವರನ್ನು ಏಕೆ ಹೊರತುಪಡಿಸಲಾಯಿತು ಎಂಬುದರ ಬಗ್ಗೆ ಸಿಂಹಾವಲೋಕನ ಮಾಡಬೇಕು ಎಂದು ನಾಯ್ಡು ತಿಳಿಸಿದ್ದಾರೆ.