ನವದೆಹಲಿ: ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು 'ದೇಶದ್ರೋಹಿ' ಎಂದು ಕರೆದ ರಾಜಸ್ತಾನದ ಬಿಜೆಪಿ ಶಾಸಕ ಕೈಲಾಶ್ ಚೌಧರಿ, ರಾಹುಲ್‌ನ್ನು ನೇಣಿಗೇರಿಸಿ ಇಲ್ಲವೇ ಶೂಟ್ ಮಾಡಿ ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ.
ರಾಜಸ್ತಾನದ ಬಾರ್ಮರ್ ಜಿಲ್ಲೆಯ ಬೈತೂ ವಿಧಾನಸಭಾ ಕ್ಷೇತ್ರದ ಶಾಸಕ ಚೌಧರಿ, ಜೆಎನ್‌ಯು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ರಾಹುಲ್ ಭಾಗವಹಿಸಿದ್ದಕ್ಕಾಗಿ ಈ ರೀತಿ ಕಿಡಿಕಾರಿದ್ದಾರೆ.
ಅಮೇಥಿ ಸಂಸದ ರಾಹುಲ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ಚೌಧರಿ, ರಾಹುಲ್‌ನ್ನು ಕಾಂಗ್ರೆಸ್ಸಿಗರು ರಾಜಕುಮಾರ ಅಂತಾರೆ. ಅಂಥಾ ವ್ಯಕ್ತಿ ಅಫ್ಜಲ್ ಗುರುವನ್ನು ಹುತಾತ್ಮ ಎಂದೂ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುವ ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತಿದ್ದಾರೆ. ಈ ರೀತಿ ದೇಶದ್ರೋಹಿಗಳಿಗೆ ಬೆಂಬಲ ನೀಡುವ ರಾಹುಲ್‌ಗೆ ಭಾರತದಲ್ಲಿರಲು ಯಾವುದೇ ಹಕ್ಕು ಇಲ್ಲ ಎಂದಿದ್ದಾರೆ.
ರಾಜಸ್ತಾನದಲ್ಲಿ ನಡೆದ ಕಿಸಾನ್ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ವೇಳೆ ಚೌಧರಿ ರಾಹುಲ್ ವಿರುದ್ಧ ಈ ರೀತಿಯ ಟೀಕಾಪ್ರಹಾರ ಮಾಡಿದ್ದಾರೆ.