ಗುವಾಹತಿ: ಉಗ್ರರ ದಾಳಿ ಕುರಿತು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ರವಾನಿಸದೇ ಇದಿದ್ದರೆ, ಪರಿಸ್ಥಿತಿ ಮತ್ತಷ್ಟು ಕೆಟ್ಟದಾಗಿರುತ್ತಿತ್ತು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಪಠಾಣ್ ಕೋಟ್ ಸೇನಾ ವಾಯುನೆಲೆಯಲ್ಲಿನ ಉಗ್ರರ ದಾಳಿ ಪ್ರಕರಣದ ಹಿನ್ನಲೆಯಲ್ಲಿ ಗುವಾಹತಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ಉಗ್ರ ದಾಳಿ ಕುರಿತು ಗುಪ್ತಚರ ಇಲಾಖೆ ಮೊದಲೇ ಮಾಹಿತಿ ನೀಡಿತ್ತು. ಹೀಗಾಗಿ ಕೇಂದ್ರ ಸರ್ಕಾರ ಕೆಲ ಭದ್ರತಾ ಕ್ರಮಗಳನ್ನು ಕೈಗೊಂಡಿತ್ತು. ಒಂದು ವೇಳೆ ಗುಪ್ತಚರ ಇಲಾಖೆಯ ಮಾಹಿತಿ ಇಲ್ಲದೇ ಹೋಗಿದ್ದರೆ ಪಠಾಣ್ ಕೋಟ್ ನಲ್ಲಿನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿತ್ತು. ಗುಪ್ತಚರ ಇಲಾಖೆಯ ಅಧಿಕಾರಿಗಳು ಸಂಶಯಾಸ್ಪದ ಕರೆಗಳನ್ನು ಪರಿಶೀಲಿಸಿದ್ದು, ಈ ಪೈಕಿ ಉಗ್ರರು ಪಾಕಿಸ್ತಾನದಲ್ಲಿರುವ ತಮ್ಮ ನಾಯಕರೊಂದಿಗೆ ಮಾತನಾಡಿರುವ ಕುರಿತು ಮಾಹಿತಿಗಳು ಲಭ್ಯವಾಗಿವೆ. ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸಲಾಗುವುದು ಎಂದು ಹೇಳಿದರು.
ಇನ್ನು ಪಠಾಣ್ ಕೋಟ್ ನಲ್ಲಿ ನಡೆಯುತ್ತಿರುವ ಉಗ್ರರ ವಿರುದ್ಧದ ಕಾರ್ಯಾಚಾರಣೆ ಭಾನುವಾರವೂ ಮುಂದುವರೆದಿದ್ದು, ನಿನ್ನೆ ಉಗ್ರರ ಗುಂಡೇಟಿನಿಂದ ಗಾಯಗೊಂಡಿದ್ದ ನಾಲ್ಕು ಮಂದಿ ಸೈನಿಕರು ಇಂದು ಚಿಕಿತ್ಸೆ ಫಲಕಾರಿಯಾಗದೇ ಹುತಾತ್ಮರಾಗಿದ್ದಾರೆ. ಅಲ್ಲದೆ ಇಂದು ಪಠಾಣ್ ಕೋಟ್ ನಲ್ಲಿರುವ ಸೇನಾ ವಾಯುನೆಲೆಯಲ್ಲಿ ಅಡಗಿ ಕುಳಿತಿರುವ ಉಗ್ರರು ಸಿಡಿಸಿದ ಐಇಡಿ ಬಾಂಬ್ ಸ್ಫೋಟದಿಂದಾಗಿ ಓರ್ವ ಸೈನಿಕಾಧಿಕಾರಿ ಮೃತರಾಗಿದ್ದಾರೆ. ಆ ಮೂಲಕ ಪಠಾಣ್ ಕೋಟ್ ಉಗ್ರ ದಾಳಿ ಪ್ರಕರಣದಲ್ಲಿ ಈ ವರೆಗೂ 10 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ನಡುವೆ ಅಡಗಿ ಕುಳಿತಿರುವ ಉಗ್ರರಿಗಾಗಿ ಭಾರತೀಯ ಸೇನೆ ತನ್ನ ಕಾರ್ಯಾಚರಣೆ ಮುಂದುವರೆಸಿದ್ದು, ರಷ್ಯಾ ಮೂಲದ ಅತ್ಯಾಧುನಿಕ ಯುದ್ಧ ಹೆಲಿಕಾಪ್ಟರ್ ಎಂಐ35 ಮತ್ತು ಇಸ್ರೇಲ್ ಮೂಲದ ಚಾಲಕ ರಹಿತ ಲಘು ಯುದ್ಧ ವಿಮಾನ ಹೆರಾನ್ ಕಾರ್ಯಾಚರಣೆಯಲ್ಲಿ ತೊಡಗಿದೆ.