ಶ್ರೀನಗರ: ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವಾದರೆ, ವಿಧಾನಸಭೆ ವಿಸರ್ಜನೆಗೆ ಶಿಫಾರಸು ಮಾಡಿ, ಮತ್ತೊಮ್ಮೆ ಚುನಾವಣೆ ಎದುರಿಸುವಂತೆ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿಗೆ ಎನ್ ಸಿಪಿ ನಾಯಕ ಓಮರ್ ಅಬ್ದುಲ್ಲಾ ಸಲಹೆ ನೀಡಿದ್ದಾರೆ.
ಮೆಹಬೂಬಾ ಮುಫ್ತಿ ಅವರಿಗೆ ಪತ್ರ ಬರೆದಿರುವ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ, ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ವಿಳಂಬ ಧೋರಣೆ ಅನುಸರಿಸುತ್ತಿರುವುದು ರಾಜ್ಯದ ಜನತೆಗೆ ಮಾಡುತ್ತಿರುವ ಅನ್ಯಾಯ. ಒಂದು ವೇಳೆ ಮುಖ್ಯಮಂತ್ರಿಗಾದಿಯನ್ನು ವಹಿಸಿಕೊಳ್ಳಲು ಸಾಧ್ಯವಾಗದೇ ಇದ್ದರೆ ರಾಜ್ಯಪಾಲರಿಗೆ ವಿಧಾನಸಭೆಯನ್ನು ವಿಸರ್ಜಿಸುವಂತೆ ಶಿಫಾರಸು ಮಾಡಿ ಎಂದು ಸಲಹೆ ನೀಡಿದ್ದಾರೆ.
ಒಂದು ವರ್ಷದ ಒಳಗೆ ಮುಖ್ಯಮಂತ್ರಿ ಆಯ್ಕೆ ನಡೆಯದೇ ಇದ್ದಲ್ಲಿ ಜಮ್ಮು-ಕಾಶ್ಮೀರದಲ್ಲಿ ಮತ್ತೊಮ್ಮೆ ಕೇಂದ್ರದ ಆಡಳಿತ ಹೇರಲಾಗುತ್ತದೆ. ಪಿಡಿಪಿ ನೇತೃತ್ವದ ಸರ್ಕಾರದ ಬಗ್ಗೆ ರಾಜ್ಯದ ಜನತೆಗೆ ಅಪಾರ ನಿರೀಕ್ಷೆಗಳಿವೆ ಅದನ್ನು ಹುಸಿಗೊಳಿಸಬಾರದು ಎಂದು ಪತ್ರದಲ್ಲಿ ಓಮರ್ ಅಬ್ದುಲ್ಲಾ ಒತ್ತಾಯಿಸಿದ್ದಾರೆ.