ಪಠಾಣ್ ಕೋಟ್ ದಾಳಿಯ ಆರು ಭಯೋತ್ಪಾದಕರ ಪೈಕಿ ಇಬ್ಬರು 'ಒಳಗಿನವರು'?: ಎನ್ಐಎ ಶಂಕೆ
ಪಠಾಣ್ ಕೋಟ್ ವಾಯು ನೆಲೆ ಮೇಲೆ ದಾಳಿ ನಡೆಸಿದ್ದ 6 ಭಯೋತ್ಪಾದಕರ ಪೈಕಿ ಇಬ್ಬರು ಒಳಗಿನವರಾಗಿರುವ ಸಾಧ್ಯತೆ ಇದೆ
ನವದೆಹಲಿ: ಪಠಾಣ್ ಕೋಟ್ ವಾಯು ನೆಲೆ ಮೇಲೆ ದಾಳಿ ನಡೆಸಿದ್ದ 6 ಭಯೋತ್ಪಾದಕರ ಪೈಕಿ ಇಬ್ಬರು ಒಳಗಿನವರಾಗಿರುವ ಸಾಧ್ಯತೆ ಇದೆ ಎಂದು ತನಿಖಾ ತಂಡ ಎನ್ಐಎ ಶಂಕೆ ವ್ಯಕ್ತಪಡಿಸಿರುವುದನ್ನು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
ದಾಳಿಗೆ ಸಂಬಂಧಿಸಿದಂತೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಮುಂದಿನ ವಾರ ಬರಲಿದ್ದು, ದಾಳಿ ನಡೆದ ಪ್ರದೇಶದಿಂದ ಮಾಡಲಾಗಿರುವ ಅಥವಾ ಸ್ವೀಕರಿಸಲಾಗಿರುವ ಕರೆ ಮಾಹಿತಿ ಹಾಗೂ ಏರ್ ಫೋರ್ಸ್ ಸ್ಟೇಷನ್ ಸಿಬ್ಬಂದಿಗಳ ಕೂಲಂಕುಶ ಪರಿಶೀಲನೆ ನಂತರವಷ್ಟೇ ಶಂಕಿತ ಒಳಗಿನವರನ್ನು ಗುರುತಿಸಲು ಸಾಧ್ಯವಾಗಲಿದೆ ಎಂದು ಎನ್ಐಎ ಅಧಿಕಾರಿಗಳು ಹೇಳಿದ್ದಾರೆ.
ದಾಳಿ ನಡೆದ ಬಳಿಕ ಸರ್ಕಾರ ನೀಡಿದ ಹೇಳಿಕೆ ಆರು ಜನರು ವಾಯು ನೆಲೆಗೆ ಅಕ್ರಮವಾಗಿ ಪ್ರವೇಶಿಸಿರುವ ಬಗ್ಗೆ ಉಲ್ಲೇಖಿಸಿತ್ತು. ಈ ಪೈಕಿ ನಾಲ್ವರನ್ನು ಮಾತ್ರ ಪಾಕಿಸ್ತಾನದಿಂದ ಒಳನುಸುಳಿದ್ದ ಉಗ್ರರು ಎಂದು ಗುರುತಿಸಲಾಗಿತ್ತು. ಆದರೆ ಇಬ್ಬರ ಬಗೆಗಿನ ಮಾಹಿತಿ ಈ ವರೆಗೂ ಬಹಿರಂಗವಾಗಿಲ್ಲ. ಎನ್ಐಎ ಅಧಿಕಾರಿಗಳ ಪ್ರಕಾರ ಈ ಇಬ್ಬರು ಒಳಗಿನವರಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಸೇನೆಯಿಂದ ಹತರಾದ ಇಬ್ಬರು ಒಳಗಿನವರೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ವಾಯುನೆಲೆಯಲ್ಲಿರುವ ಎಲ್ಲಾ ಸಿಬ್ಬಂಧಿಗಳನ್ನೂ ಪರಿಶೀಲನೆ ನಡೆಸುತ್ತಿದ್ದಾರೆ. ಶಂಕಿತ ಒಳಗಿನವರು ಜೆಇಎಂ ಉಗ್ರ ಗುಂಪಿಗೆ ಸೇರದವರೆಂದು ಹೇಳಲಾಗಿದ್ದು, ಅವರ ಗುರುತನ್ನು ಪತ್ತೆಹಚ್ಚಲು ಎನ್ಐಎ ತಂಡ ವಾಯು ನೆಲೆಯಲ್ಲಿರುವ 3,500 ಜನರನ್ನು ಕೂಲಂಕುಷ ಪರಿಶೀಲನೆಗೊಳಪಡಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.