ದೇಶ

16 ಮಹತ್ವದ ಒಪ್ಪಂದಗಳ ಸಹಿಗೆ ಸಾಕ್ಷಿಯಾದ ಚಂಡೀಘಡ

Srinivasamurthy VN

ಚಂಡೀಘಡ: ಚಂಡೀಗಢದ ರಾಕ್ ಗಾರ್ಡನ್​ನಲ್ಲಿ ನಡೆದ ವಾಣಿಜ್ಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಅವರು 16 ಮಹತ್ವದ  ಒಪ್ಪಂದಗಳಿಗೆ ಸಹಿ ಮಾಡಿದರು.

ಫ್ರಾನ್ಸ್ ನ ಹಲವು ಉತ್ಪನ್ನಗಳಿಗೆ ಭಾರತದಲ್ಲಿ ಮಾರುಕಟ್ಟೆ ಕಲ್ಪಿಸುವ ಕುರಿತು ಮತ್ತು ಚಂಡೀಗಢ, ನಾಗಪುರ, ಪುದುಚೆರಿಗಳನ್ನು ಸ್ಮಾರ್ಟ್ ಸಿಟಿಯಾಗಿ ಪರಿವರ್ತಿಸುವ ಮಹತ್ವದ ಒಪ್ಪಂದಗಳು  ಸೇರಿದಂತೆ ಸುಮಾರು 16 ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಉಳಿದಂತೆ ನಗರಾಭಿವೃದ್ಧಿ ಕ್ಷೇತ್ರದಲ್ಲಿ ತಂತ್ರಜ್ಞಾನ ಸಹಕಾರ, ಭಾರತದ ವಿವಿಧ  ರಾಜ್ಯಗಳಲ್ಲಿ ಪವನ ವಿದ್ಯುತ್ ಉತ್ಪಾದನೆ ಸೇರಿದಂತೆ ಹಲವು ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಮಾಡಿದ್ದಾರೆ.

ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಫ್ರಾನ್ಸ್​ನ  ಉತ್ಪನ್ನಗಳಿಗೆ ಭಾರತದಲ್ಲಿ ಮಾರುಕಟ್ಟೆ ಉತ್ತಮವಾಗಿದೆ. ಚಂಡೀಗಢ, ನಾಗಪುರ, ಪುದುಚೆರಿಗಳನ್ನು ಸ್ಮಾರ್ಟ್ ಸಿಟಿಯಾಗಿ ಪರಿವರ್ತಿಸಲು ಮುಂದಾದ ಫ್ರಾನ್ಸ್​ನ ನಿರ್ಧಾರವನ್ನು  ಸ್ವಾಗತಿಸುತ್ತೇನೆ. ಭಾರತದಲ್ಲಿ 800 ದಶಲಕ್ಷ ಯುವಕರಿದ್ದಾರೆ. ಇವರ ಸಹಕಾರದೊಂದಿಗೆ ಉತ್ತಮ ಆಡಳಿತ ನೀಡುವ ಮೂಲಕ ಜಾಗತಿಕವಾಗಿ ಭಾರತ ಉನ್ನತ ಮಟ್ಟಕ್ಕೆ ಏರಲಿದೆ ಎಂದರು.

ಬಳಿಕ ಮಾತನಾಡಿದ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಅವರು, ವಿಶ್ವದಲ್ಲೇ ಭಾರತ ವಾಣಿಜ್ಯೋದ್ಯಮದಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಭಾರತದ ಜತೆ  ಕಾರ್ಯನೀತಿ ಬಾಂಧವ್ಯವನ್ನು ವೃದ್ಧಿಸಿಕೊಳ್ಳುವುದು ನನ್ನ ಈ ಭೇಟಿಯ ಮುಖ್ಯ ಉದ್ದೇಶ. ಅಂದು ಮೋದಿ ಫ್ರಾನ್ಸ್​ಗೆ ಭೇಟಿ ನೀಡಿದ ಸಂದರ್ಭ ತೆಗೆದುಕೊಂಡ ನಿರ್ಧಾರಗಳನ್ನು ಕಾರ್ಯರೂಪಕ್ಕೆ  ತರುವುದು ಭೇಟಿಯ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.

SCROLL FOR NEXT