ಹರ್ಯಾಣ (ಇಂಡ್): ಆಸ್ತಿ ವಿವಾದ ಸಂಬಂಧ ಮಗನೊಬ್ಬ ತನ್ನ 75 ವರ್ಷದ ತಂದೆಯನ್ನು ಗುಂಡಿಟ್ಟು ಕೊಂಡಿರುವ ಘಟನೆ ಹರ್ಯಾಣದ ಇಂಡ್ ಜಿಲ್ಲೆಯ ಜಂಜರ್ಕುಂಡ್ ಗ್ರಾಮದಲ್ಲಿ ನಡೆದಿದೆ.
ಜಸ್ವಂತ್ ಹತ್ಯೆಗೀಡಾದ ತಂದೆ. ಈತನ ಕಿರಿಯ ಮಗ ಬಲ್ಜಿತ್ ಗುಂಡಿಟ್ಟು ಕೊಂದ ಆರೋಪಿಯಾಗಿದ್ದಾನೆ. ನಿನ್ನೆ ರಾತ್ರಿ ಜಸ್ವಂತ್ ಮನೆಯ ಕೆಳಗಿನ ಕೊಠಡಿಯಲ್ಲಿ ಮಲಗಿದ್ದರು. ಕುಟುಂಬದ ಬೇರೆ ಸದಸ್ಯರು ಕೊಠಡಿಯ ಮೇಲಿನ ಮನೆಯಲ್ಲಿ ಮಲಗಿ ನಿದ್ರಿಸುತ್ತಿದ್ದರು. ಈ ವೇಳೆ ಬಂದ ಬಲ್ಜೀತ್ ಬಂದೂಕಿನಿಂದ ಗುಂಡು ಹಾರಿಸಿ ತಂದೆಯನ್ನು ಕೊಂದಿದ್ದಾನೆ.
ಶಬ್ದ ಕೇಳಿ ಕೆಳಗೆ ಬಂದ ಜಸ್ವಂತ್ ಮೊಮ್ಮಗ, ಬಲ್ಜೀತ್ ಓಡಿ ಹೋಗುತ್ತಿರುವುದನ್ನು ಗಮನಿಸಿದ್ದಾನೆ. ಕೂಡಲೇ ಜಸ್ವಂತ್ ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಾಗಲೇ ಮೃತ ಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಸಂಬಂಧ ಬಲ್ಜಿತ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನಿಗಾಗಿ ಶೋಧ ನಡೆಸಿದ್ದಾರೆ.