ಹೈದರಾಬಾದ್: ಉಗ್ರರಿಗೆ ಸ್ಫೂರ್ತಿಯಾಗಿರುವ ವಿವಾದಾತ್ಮಕ ಇಸ್ಲಾಮ್ ಧರ್ಮ ಪ್ರಚಾರಕ ಜಾಕಿರ್ ನಾಯಕ್ ವಿರುದ್ಧ ಕೇಂದ್ರ ಗೃಹ ಇಲಾಖೆ ತನಿಖೆ ಪ್ರಾರಂಭಿಸಿದೆ. ಈ ಬೆನ್ನಲ್ಲೇ ಎಲ್ಲರ ಹುಬ್ಬೇರಿಸುವ ವಿಷಯವೊಂದು ಬಹಿರಂಗವಾಗಿದ್ದು ಹೈದರಾಬಾದ್ ನ ಸರ್ದಾರ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಐಪಿಎಸ್ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಲು ಅಹವಾನಿಸಲಾಗಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.
2013 ರ ಮೇ 13 ರಂದು ಜಾಕಿರ್ ನಾಯಕ್ ಹೈದರಾಬಾದ್ ನ ಸರ್ದಾರ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಐಪಿಎಸ್ ತರಬೇತಿ ಪಡೆಯುತ್ತಿದ್ದ ಭಾರತದ 160 ಅಧಿಕಾರಿಗಳನ್ನುದ್ದೇಶಿಸಿ ( ನೇಪಾಳ, ಭೂತಾನ್, ಮಾಲ್ಡಿವ್ಸ್ ನ 10 ಅಧಿಕಾರಿಗಳು) ಭಯೋತ್ಪಾದನೆ ಹಾಗೂ ಜಿಹಾದ್: ಇಸ್ಲಾಮ್ ನ ದೃಷ್ಟಿಕೋನ ಎಂಬ ವಿಷಯದ ಬಗ್ಗೆ ಮಾತನಾಡಿದ್ದರು ಎಂದು ತಿಳಿದುಬಂದಿದೆ.
ಅಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತರಬೇತಿ ಪಡೆಯುತ್ತಿದ್ದ ಅಧಿಕಾರಿಯೊಬ್ಬರು, ಇಂದು ತೆಲಂಗಾಣದಲ್ಲಿ ಸೇವೆ ಸಲ್ಲಿಸುತ್ತಿದ್ದು, ಜಾಕಿರ್ ನಾಯಕ್ ನ ಕಾರ್ಯಕ್ರಮದ ಬಗ್ಗೆ ಡಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಜಾಕಿರ್ ನಾಯಕ್ ನ ಭಾಷಣದ ನಂತರ ಆತನ ವಿಚಾರಧಾರೆಗಳನ್ನು ಕೆಲವು ತರಬೇತಿ ನಿರತ ಅಧಿಕಾರಿಗಳು ಒಪ್ಪದೇ ಇದ್ದ ಪರಿಣಾಮ ಅಧಿಕಾರಿಗಳು ಹಾಗೂ ಜಾಕಿರ್ ನಾಯಕ್ ನ ನಡುವೆ ವಾಗ್ವಾದ ನಡೆದಿತ್ತು ಎಂದು ತೆಲಂಗಾಣದ ಅಧಿಕಾರಿ ಹಳೆಯ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ.
ಪೊಲೀಸ್ ಅಧಿಕಾರಿಗಳು ಮಾತ್ರವಲ್ಲದೆ ಅರಣ್ಯ ಸೇವೆಯ 70 ಅಧಿಕಾರಿಗಳು, ಅರೆ ಸೇನಾಪಡೆಯ ಅಧಿಕಾರಿಗಳೂ ಸಹ ಜಾಕಿರ್ ನಾಯಕ್ ಉಪನ್ಯಾಸಕ್ಕೆ ಹಾಜರಾಗಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ. ಹಲವು ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ಖ್ಯಾತ ವಾಗ್ಮಿಗಳಿಂದ ಭಾಷಣಗಳನ್ನು ಆಯೋಜಿಸುವುದು ಎನ್ ಪಿಎ ಯ ನೀತಿಗಳಲ್ಲಿ ಒಂದಾಗಿದ್ದು ಪ್ರತಿ ಎರಡು ತಿಂಗಳಿಗೊಮ್ಮೆ ಈ ಕಾರ್ಯಕ್ರಮ ನಡೆಯಲಿದೆ. ಹೈದರಾಬಾದ್ ನ ಸರ್ದಾರ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಐಪಿಎಸ್ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ್ದನ್ನು ಜಾಕಿರ್ ನಾಯಕ್ ನ ಫೇಸ್ ಬುಕ್ ಪೇಜ್ ಸಹ ಒಪ್ಪಿಕೊಂಡಿದೆ.
ಇಸ್ಲಾಮ್ ನ ವಹಾಬಿ ಉಗ್ರಗಾಮಿ ಪಂಥವನ್ನು ಜಾಕಿರ್ ನಾಯಕ್ ಪ್ರತಿಪಾದಿಸುತ್ತಿದ್ದು, ಈತ ತನ್ನ ಭಾಷಣಗಳ ಮೂಲಕ ಉರವಾದವನ್ನು ಉತ್ತೇಜಿಸುತ್ತಿದ್ದ, ಇತ್ತೀಚೆಗಷ್ಟೇ ಢಾಕಾದಲ್ಲಿ ದಾಳಿ ನಡೆಸಿದ ಉಗ್ರರಿಗೆ ಜಾಕಿರ್ ನಾಯಕ್ ಸ್ಫೂರ್ತಿಯಾಗಿದ್ದ.