ನವದೆಹಲಿ: ಕಾಶ್ಮೀರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಮಾಡುತ್ತಿರುವ ವರದಿಗಳ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ನಿನ್ನೆಯಷ್ಟೇ ಆಫ್ರಿಕಾ ಪ್ರವಾಸ ಮುಗಿಸಿ ಭಾರತಕ್ಕೆ ವಾಪಸಾದ ಪ್ರಧಾನಿ ನರೇಂದ್ರ ಮೋದಿ ಅವರು, ದೆಹಲಿಯ ತಮ್ಮ ನಿವಾಸಕ್ಕೆ ಆಗಮಿಸುತ್ತಿದ್ದಂತೆಯೇ ಕಾಶ್ಮೀರ ವಿಚಾರ ಚರ್ಚಿಸಲು ಉನ್ನತ ಮಟ್ಟದ ಸಭೆ ಕರೆದಿದ್ದರು. ಸಭೆಯಲ್ಲಿ ಪಾಲ್ಗೊಳ್ಳುವಂತೆ ಕಾಶ್ಮೀರ ಸಿಎಂ ಮುಹಬೂಬಾ, ಪ್ರತಿಪಕ್ಷ ನಾಯಕ ಒಮರ್ ಅಬ್ದುಲ್ಲಾ ಸೇರಿದಂತೆ ಕಣಿವೆ ರಾಜ್ಯದ ಉನ್ನತ ಭದ್ರತಾ ಅಧಿಕಾರಿಗಳಿಗೆ ಆಹ್ವಾನ ನೀಡಲಾಗಿತ್ತು. ಆದರೆ ಕಾರಣಾಂತರಗಳಿಂದ ಸಿಎಂ ಮೆಹಬೂಬಾ ಅವರು ಸಭೆಗೆ ಗೈರಾಗಿದ್ದರು.
ಕಾಶ್ಮೀರದ ಸ್ಥಿತಿಗತಿ ಕುರಿತು ಸೇನಾ ಮುಖ್ಯಸ್ಥ ಜ. ದಲ್ಬೀರ್ ಸಿ೦ಗ್ ಸುಹಾಗ್ ಪ್ರಧಾನಿ ಮೋದಿ ಅವರಿಗೆ ವರದಿ ನೀಡಿದರು. ಈ ವೇಳೆ ಗಡಿ ಭಾಗದಲ್ಲಿ ಉಗ್ರರು ನುಸುಳದ೦ತೆ ತಡೆಯುವುದರ ಜತೆಗೆ ಅಮರನಾಥ ಯಾತ್ರಿಗಳಿಗೆ ಸೂಕ್ತ ಭದ್ರತೆ ಒದಗಿಸುವ೦ತೆ ಪ್ರಧಾನಿ ಮೋದಿ ಸೇನಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಇನ್ನು ಸಭೆಯಲ್ಲಿ ಕೇಂದ್ರ ಸಚಿವರು, ಕಣಿವೆ ರಾಜ್ಯದ ಭದ್ರತಾ ಅಧಿಕಾರಿಗಳು ಮತ್ತು ಗುಪ್ತಚರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಕಾಶ್ಮೀರ ಗಲಭೆ ಸಂಬಂಧ ಮಾಹಿತಿ ಕಲೆಹಾಕಿದರು. ಇನ್ನು ಇದೇ ವೇಳೆ ಉಗ್ರ ಕಮಾಂಡರ್ ಬುರ್ಹಾನ್ ವಾನಿಯನ್ನು ಹೀರೋ ಎಂಬಂತೆ ಬಿಂಬಿಸುತ್ತಿರುವ ಕಾಶ್ಮೀರ ಮಾಧ್ಯಮಗಳ ವಿರುದ್ಧ ಪ್ರಧಾನಿ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಬುರ್ಹಾನ್ ವಾನಿ ಹತ್ಯೆ ಬೆನ್ನಲ್ಲೇ ಆತನ ಕುರಿತ ಅತಿರಂಜಿತ ಸುದ್ದಿ ಪ್ರಸಾರ ಮಾಡುತ್ತಿರುವ ವಾಹಿನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಂತೆಯೇ ಕಣಿವೆ ರಾಜ್ಯದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದೇ ವೇಳೆ ಕಣಿವೆ ರಾಜ್ಯದ ಭದ್ರತಾ ಅಧಿಕಾರಿಗಳಿಗೆ "ಕಣಿವೆ ರಾಜ್ಯದಲ್ಲಿ ಶಾ೦ತಿ ಸ್ಥಾಪನೆಗಾಗಿ ಅಗತ್ಯ ಬಿದ್ದಲ್ಲಿ ಹೆಚ್ಚುವರಿ ಸೈನಿಕರನ್ನು ಕಳಿಸಿಕೊಡಲಾಗುವುದು ಎ೦ದು ಪ್ರಧಾನಿ ಹೇಳಿದರು. ಅಂತೆಯೇ ಶಾ೦ತಿಯುತವಾಗಿ ವತಿ೯ಸುವ೦ತೆ ಕಣಿವೆ ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ.
ಕಣಿವೆ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಕುರಿತು ಚರ್ಚೆ
ಇದೇ ವೇಳೆ ಈ ಹಿ೦ದೆ ಎನ್‍ಡಿಎ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ಘೋಷಿಸಿದ್ದ 80 ಸಾವಿರ ಕೋಟಿ ರು. ಪ್ಯಾಕೇಜ್ ನೀಡುವ ಬಗ್ಗೆಯೂ ಸಭೆಯಲ್ಲಿ ಗ೦ಭೀರ ಚರ್ಚೆ ನಡೆಸಲಾಯಿತು. ಇದೇ ವೇಳೆ ಅಮರನಾಥ ಯಾತ್ರಾಥಿ೯ಗಳಿಗೆ ಒದಗಿಸಿರುವ ಭದ್ರತೆ ಹಾಗೂ ಸೌಕಯ೯ದ ಕುರಿತು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಗಲಭೆಯಿ೦ದ ಅಮಾಯಕ ವ್ಯಕ್ತಿಗಳು ಸ೦ಕಷ್ಟಕ್ಕೀ ಡಾಗದ೦ತೆ ಭದ್ರತಾ ಸಿಬ್ಬ೦ದಿ, ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಶಾ೦ತಿ ಸ್ಥಾಪನೆ ನಿಟ್ಟಿನಲ್ಲಿ ಕೇ೦ದ್ರ ಸರ್ಕಾರದಿ೦ದ ಎಲ್ಲ ನೆರವು ನೀಡುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ ಎ೦ದು ಸಚಿವ ಜಿತೇ೦ದ್ರ ಸಿ೦ಗ್ ಮಾಹಿತಿ ನೀಡಿದ್ದಾರೆ.
ಮೆಹಬೂಬಾ ಗೈರು; ಸಿಎಂ ವಿರುದ್ಧ ಒಮರ್ ಅಬ್ದುಲ್ಲಾ ಅಸಮಾಧಾನ
ಇನ್ನು ಆಫ್ರಿಕಾ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತಕ್ಕೆ ವಾಪಸ್ಸಾಗುತ್ತಿದ್ದಂತೆಯೇ ದೆಹಲಿಯಲ್ಲಿರುವ ತಮ್ಮ ನಿವಾಸದಲ್ಲಿ ಉನ್ನತ ಮಟ್ಟದ ಸಭೆ ಕರೆದಿದ್ದರು. ಸಭೆಗೆ ಆಗಮಿಸುವಂತೆ ಕಾಶ್ಮೀರ ಸಿಎಂ ಮುಹಬೂಬಾ, ಪ್ರತಿಪಕ್ಷ ನಾಯಕ ಒಮರ್ ಅಬ್ದುಲ್ಲಾ ಸೇರಿದಂತೆ ಕಣಿವೆ ರಾಜ್ಯದ ಉನ್ನತ ಭದ್ರತಾ ಅಧಿಕಾರಿಗಳಿಗೆ ಆಹ್ವಾನ ನೀಡಿದ್ದರು. ಆದರೆ ನಿನ್ನೆ ನಡೆದ ಸಭೆಗೆ ಕಾಶ್ಮೀರ ಸಿಎಂ ಮೆಹಬೂಬಾ ಅವರು ಗೈರಾಗಿದ್ದರು. ಈ ಹಿನ್ನಲೆಯಲ್ಲಿ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಅಸಮಾಧಾನಗೊಂಡಿದ್ದಾರೆ. ಅಲ್ಲದೆ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆಯ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರೆದಿದ್ದ ಉನ್ನತ ಮಟ್ಟದ ಸಭೆಗೆ ಮೆಹಬೂಬಾ ಅವರು ಬರಬೇಕಿತ್ತು ಎಂದು ಹೇಳಿದ್ದಾರೆ.