ನವದೆಹಲಿ: ಕಳೆದ ವಾರ ಭ್ರಷ್ಟಾಚಾರ ಆರೋಪದ ಮೇಲೆ ಸಿಬಿಐನಿಂದ ಬಂಧನಕ್ಕೊಳಗಾಗಿದ್ದ ಕೇಂದ್ರ ಸರ್ಕಾರದ ಹಿರಿಯ ಐಎಎಸ್ ಅಧಿಕಾರಿ ಬಿ.ಕೆ. ಬನ್ಸಲ್ ಅವರ ಪತ್ನಿ ಹಾಗೂ ಪುತ್ರಿ ಮಂಗಳವಾರ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಾರ್ಪೋರೇಟ್ ವ್ಯವಹಾರಗಳ ಮಹಾ ನಿರ್ದೇಶಕರಾಗಿದ್ದ ಬನ್ಸಲ್ ಅವರ ಪತ್ನಿ ಸತ್ಯಬಾಲ(58) ಹಾಗೂ ಪುತ್ರಿ ನೇಹಾ ಅವರು ಇಂದು ದೆಹಲಿಯ ಮಧು ವಿಹಾರ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ. ಐಎಎಸ್ ಅಧಿಕಾರಿಯ ಮನೆಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಪೊಲೀಸರು ಅದನ್ನು ಪರಿಶೀಲಿಸುತ್ತಿದ್ದಾರೆ.
ಕಳೆದ ಜುಲೈ 16 ರಂದು ಬನ್ಸಲ್ ಅವರು ಖಾಸಗಿ ವಲಯದ ಉದ್ದಿಮೆಗೆ ಸಹಕರಿಸಲು ಮಧ್ಯವರ್ತಿ ವಿಶ್ವದೀಪ್ ಬನ್ಸಲ್ ಮೂಲಕ 9 ಲಕ್ಷ ರುಪಾಯಿ ಲಂಚ ಪಡೆದಿದ್ದನ್ನು ಪತ್ತೆ ಹಚ್ಚಿದ್ದ ಸಿಬಿಐ ಅವರನ್ನು ಬಂಧಿಸಿತ್ತು. ಘಟನೆಯಿಂದ ನೊಂದು ಬನ್ಸಲ್ ಪತ್ನಿ ಮತ್ತು ಪುತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಹೇಳಲಾಗಿದೆ.
ಬಂಧಿತ ಬನ್ಸಲ್ ಅವರಿಂದ ಒಟ್ಟು 56 ಲಕ್ಷ ರುಪಾಯಿ ಹಣ ವಶಪಡಿಸಿಕೊಂಡಿರುವ ಸಿಬಿಐ, ಮಧ್ಯವರ್ತಿ ವಿಶ್ವದೀಪ್ನನ್ನು ದೆಹಲಿ ಹೊಟೆಲ್ ಒಂದರಿಂದ ಬಂಧಿಸಿ ಆತನಿಂದ 16 ಲಕ್ಷ ವಶಪಡಿಸಿಕೊಂಡಿದೆ. ಅಲ್ಲದೇ, ಬನ್ಸಲ್ ಭಾಗಿಯಾಗಿದ್ದ ವಿವಿಧ ಪ್ರಕರಣಗಳಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಕೇಸ್ ದಾಖಲಿಸಿದ ಸಿಬಿಐ, ಮುಂಬೈ ಮೂಲದ ಔಷಧ ಕಂಪನಿ ವಿಷಯಕ್ಕೆ ಸಂಬಂಧಿಸಿದಂತೆ 50 ಲಕ್ಷ ರುಪಾಯಿಗಳ ಬೇಡಿಕೆಯಿಟ್ಟಿದ್ದ ಬನ್ಸಲ್ ಕಡೆಗೆ ದೆಹಲಿ ಮೂಲದ ವ್ಯಕ್ತಿಯೊಬ್ಬನ ಮಧ್ಯಸ್ಥಿಕೆಯಿಂದ ಲಂಚದ ಪ್ರಮಾಣ ಕಡಿಮೆ ಮಾಡಿದ್ದರು ಎಂದು ತಿಳಿಸಿದೆ.