ಬಿಎಸ್ ಪಿ ನಾಯಕಿ ಮಾಯಾವತಿ ಮತ್ತು ದಯಾಶಂಕರ್ ಸಿಂಗ್ (ಸಂಗ್ರಹ ಚಿತ್ರ)
ಲಕ್ನೋ: ಬಿಎಸ್ ಪಿ ನಾಯಕಿ ಮಾಯಾವತಿಯವರನ್ನು ವೇಶ್ಯೆಗೆ ಹೋಲಿಸಿದ್ದ ಉತ್ತರ ಪ್ರದೇಶದ ಬಿಜೆಪಿ ಘಟಕದ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ನನ್ನು ವಜಾಗೊಳಿಸಲಾಗಿದೆ.
ಅವರ ಹೇಳಿಕೆ ಬಗ್ಗೆ ಇಂದು ಸಂಸತ್ ಸದನಗಳಲ್ಲಿ ಗದ್ದಲವೆದ್ದಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿವಾದವಾಗಿ ಮುಜುಗರಕ್ಕೀಡಾಗುವುದನ್ನು ತಪ್ಪಿಸಲು ಬಿಜೆಪಿ ಅವರನ್ನು ಉತ್ತರ ಪ್ರದೇಶ ರಾಜ್ಯದ ಬಿಜೆಪಿ ಉಪಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದೆ. ದಯಾಶಂಕರ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಬಿಜೆಪಿ ಹೇಳಿದೆ.
ಇನ್ನೊಂದೆಡೆ ದಯಾಶಂಕರ್ ಸಿಂಗ್ ಹೇಳಿಕೆಗೆ ಬಿಜೆಪಿ ಹಿರಿಯ ನಾಯಕ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬುಧವಾರ ವೈಯಕ್ತಿಕವಾಗಿ ವಿಷಾದ ಕೋರಿದ್ದಾರೆ.
'' ಇದು ಸರಿಯಾದುದಲ್ಲ. ಅವರು ಬಳಸಿದ ಶಬ್ದವನ್ನು ಖಂಡಿಸುತ್ತೇನೆ. ಅವರು ಯಾಕೆ ಹೀಗೆ ಹೇಳಿದರು ಎಂದು ನಾವು ತನಿಖೆ ಮಾಡುತ್ತೇವೆ. ವೈಯಕ್ತಿಕವಾಗಿ ನಾನು ವಿಷಾದ ಹೇಳುತ್ತೇನೆ. ನಿಮ್ಮ ಗೌರವಕ್ಕೆ ನಾವು ಬೆಲೆ ನೀಡುತ್ತಿದ್ದು, ನಿಮ್ಮ ಜೊತೆ ಇರುತ್ತೇವೆ ಎಂದು ರಾಜ್ಯಸಭೆಯಲ್ಲಿ ಮಾಯಾವತಿಯವರತ್ತ ನೋಡಿ ಜೇಟ್ಲಿ ಹೇಳಿದರು.
ಇನ್ನೊಂದೆಡೆ ದಯಾಶಂಕರ್ ಸಿಂಗ್ ಹೇಳಿಕೆಗೆ ಬಿಜೆಪಿ ಉತ್ತರ ಪ್ರದೇಶ ಘಟಕ ಕೂಡ ಕ್ಷಮೆ ಕೋರಿದೆ.
ಮಾಯಾವತಿಯವರ ಬಗ್ಗೆ ಬಳಸಿರುವ ಭಾಷೆ ತುಂಬಾ ತಪ್ಪಾಗಿದೆ ಎಂದು ಉತ್ತರ ಪ್ರದೇಶ ಬಿಜೆಪಿ ಘಟಕದ ಮುಖ್ಯಸ್ಥ ಕೇಶವ್ ಪ್ರಸಾದ್ ಮೌರ್ಯ ತಿಳಿಸಿದ್ದಾರೆ.
ಟಿಕೆಟ್ ಹಂಚಿಕೆಯಲ್ಲಿ ಬಿಎಸ್ ಪಿ ಭ್ರಷ್ಟಾಚಾರವೆಸಗಿದೆ ಎಂಬ ಆರೋಪದ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದ ವೇಳೆ ನಿನ್ನೆ ಆಘಾತಕಾರಿ ಹೇಳಿಕೆ ನೀಡಿದ್ದ ದಯಾಶಂಕರ್ ಸಿಂಗ್ ಮಾಯಾವತಿಯನ್ನು ವೈಶ್ಯಗಿಂತಲೂ ಕಡೆ ಎಂದು ಹೇಳಿದ್ದರು.