ಕಾಬುಲ್: ಆಫ್ಘಾನಿಸ್ತಾನ ರಾಜಧಾನಿ ಕಾಬುಲ್ ನ ಹೊಟೆಲ್ ಮೇಲೆ ನಡೆದಿದ್ದ ಉಗ್ರ ದಾಳಿ ಪ್ರಕರಣ ಅಂತ್ಯವಾಗಿದ್ದು, ದಾಳಿಯಲ್ಲಿ ಓರ್ವ ಪೊಲೀಸ್ ಸೇರಿದಂತೆ ಮೂವರು ಉಗ್ರರು ಹತರಾಗಿದ್ದಾರೆ.
ಸೋಮವಾರ ಬೆಳಗ್ಗೆ ಈ ದಾಳಿ ನಡೆದಿದ್ದು, ಹೊಟೆಲ್ ಸಮೀಪ ಸಂಭವಿಸಿದ ಟ್ರಕ್ಬಾಂಬ್ ಸ್ಪೋಟದಿಂದ ಹೊಟೇಲ್ ಒಂದು ಭಾಗ ಸಂಪೂರ್ಣ ಜಖಂ ಆಗಿತ್ತು. ಬಳಿಕ ಏಕಾಏಕಿ ಬಿಗಿ ಭದ್ರತೆ ಇರುವ ವಿದೇಶೀ ಗುತ್ತಿಗೆದಾರರು ತಂಗಿದ್ದ ಹೋಟೆಲ್ನೊಳಕ್ಕೆ ನುಗ್ಗಿದ ಉಗ್ರರು, ಸುಮಾರು 7 ಗಂಟೆಗಳ ಕಾಲ ಹೊಟೆಲ್ ಅನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಹೊಟೆಲ್ ನ ಉತ್ತರ ದ್ವಾರದ ಮೂಲಕ ನುಗ್ಗಿದ ಉಗ್ರರು ಏಕಾಏಕಿ ಗುಂಡಿನ ಸುರಿಮಳೆಗರೆದರು. ವಿಚಾರ ತಿಳಿಯುತ್ತಿದ್ದಂತೆಯೇ ಹೊಟೆಲ್ ಅನ್ನು ಸುತ್ತುವರಿದ ಆಫ್ಘನ್ ಸೇನಾಪಡೆಗಳು ಉಗ್ರರೊಂದಿಗೆ ತೀವ್ರ ಗುಂಡಿನ ಚಕಮಕಿ ನಡೆಸಿದವು.
ಅಲ್ಲದೆ ಹೊಟೆಲ್ ಉತ್ತರ ಗೇಟ್ ಅನ್ನು ಸಂಪೂರ್ಣ ಬಂದ್ ಮಾಡಿದ ಸೇನಾಪಡೆಗಳು ಉಗ್ರರು ಪಲಾಯನವಾಗದಂತೆ ತಡೆದರು. ಅಲ್ಲದೆ ವಿಶೇಷ ಕಾರ್ಯಾಚರಣೆ ನಡೆಸಿ ಮೂವರು ಉಗ್ರರನ್ನು ಹತ್ಯೆಗೈದಿದ್ದಾರೆ. ಅಂತೆಯೇ ಘಟನೆಯಲ್ಲಿ ಓರ್ವ ಭದ್ರತಾ ಸಿಬ್ಬಂದಿಗೆ ಗುಂಡೇಟು ತಗುಲಿ ಆತನನ್ನು ಆಸ್ಪತ್ರೆ ಸೇರಿಸುವ ಮಾರ್ಗಮಧ್ಯೆ ಆತ ಅಸುನೀಗಿದ್ದಾನೆ ಎಂದು ತಿಳಿದುಬಂದಿದೆ.
ಇನ್ನು ಕುಖ್ಯಾತ ಉಗ್ರಗಾಮಿ ಸಂಘಟನೆ ತಾಲಿಬಾನ್ ಈ ದಾಳಿಯ ಹೊಣೆ ಹೊತ್ತಿದ್ದು, ಇದರಂತೆ ಮತ್ತಷ್ಟು ದಾಳಿಗಳನ್ನು ನಡೆಸುವುದಾಗಿ ಎಚ್ಚರಿಕೆ ನೀಡಿದೆ.